ಇಸ್ಲಾಮಿಕ್ ದೇಶದೊಂದಿಗೆ ವ್ಯಾಪಾರ ನಡೆಸಲ್ಲ ಎನ್ನುವ ಗಟ್ಸ್ ಬಿಜೆಪಿ ನಾಯಕರಿಗಿದೆಯಾ: ಪ್ರಿಯಾಂಕ್ ಖರ್ಗೆ ಪ್ರಶ್ನೆ

Prasthutha|

►► ಉದ್ಯೋಗ ಕೊಡಿ ಎಂದರೆ ಯುವಕರಿಗೆ ತಿಲಕ ಹಾಕಿ, ಕೇಸರಿ ಶಾಲು ಹಾಕುತ್ತಾರೆ !

- Advertisement -

ಬೆಂಗಳೂರು: ರಾಜ್ಯದಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಜಾತ್ರಾ ಮಹೋತ್ಸವಗಳಲ್ಲಿ ವ್ಯಾಪಾರ ನಿಷೇಧ ಹೇರಿರುವ ಸಂಘಪರಿವಾರ ಹಾಗೂ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಪ್ರಿಯಾಂಕ್ ಖರ್ಗೆ, ಇಸ್ಲಾಮಿಕ್ ದೇಶದೊಂದಿಗೆ ನಾವು ವ್ಯಾಪಾರ ನಡೆಸುವುದಿಲ್ಲ ಎಂದು ಹೇಳುವ ಧಮ್ಮು ಬಿಜೆಪಿಗೆ ಇದೆಯಾ ಎಂದು ಪ್ರಶ್ನಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್, ಸೌದಿ ಅರೇಬಿಯಾದೊಂದಿಗೆ 27.69 ಬಿಲಿಯನ್ ಡಾಲರ್, ಇರಾಕ್ ನೊಂದಿಗೆ 26.56 ಬಿಲಿಯನ್ ಡಾಲರ್, ಮಲೇಶಿಯಾದೊಂದಿಗೆ 12.09 ಬಿಲಿಯನ್ ಡಾಲರ್, ಕತಾರ್ ನೊಂದಿಗೆ 11.04 ಬಿಲಿಯನ್ ಡಾಲರ್ ಸೇರಿದಂತೆ ಇನ್ನಿತರ ಮುಸ್ಲಿಮ್ ರಾಷ್ಟ್ರಗಳೊಂದಿಗೆ ಭಾರತ ನಡೆಸುತ್ತಿರುವ ವ್ಯಾಪಾರದ ಲೆಕ್ಕವನ್ನು ಬಹಿರಂಗಪಡಿಸಿದ್ದಾರೆ. ಈ ವಹಿವಾಟನ್ನು ನಿರ್ಬಂಧಿಸಲು ಸಾಧ್ಯವೇ ಎಂದು ಟಾಂಗ್ ನೀಡಿದ್ದಾರೆ.

- Advertisement -

ಭಾರತಕ್ಕೆ ಕಚ್ಛಾ ತೈಲ ಯಾವ ರಾಷ್ಟ್ರಗಳಿಂದ ಬರುತ್ತಿದೆ. ಇವರು ನಾವು ಕೇವಲ ಅಮೆರಿಕ ಹಾಗೂ ರಷ್ಯಾದಿಂದ ಮಾತ್ರ ಪೆಟ್ರೋಲ್ ಖರೀದಿ ಮಾಡುತ್ತೇವೆ ಎಂದು ಹೇಳಲು ಸಾಧ್ಯವೇ? ಆದರೂ ಇಂತಹ ಸಂಕುಚಿತ ಮನಸ್ಥಿತಿ ಪ್ರದರ್ಶಿಸುತ್ತಿರುವುದೇಕೆ ಎಂದಿರುವ ಪ್ರಿಯಾಂಕ್, ಲಕ್ಷಾಂತರ ಜನ ಕೆಲಸ ಮಾಡುವ ವಿಪ್ರೋ ಯಾರದ್ದು? ನಿಮ್ಮ ಮಕ್ಕಳು ಕೆಲಸಕ್ಕೆ ಅರ್ಜಿ ಹಾಕುವಾಗ ಅದು ಯಾರದ್ದು ಎಂದು ನೋಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.

1.5 ಕೋಟಿಯಷ್ಟು ನಮ್ಮ ದೇಶದ ಜನ ಇಸ್ಲಾಂ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ವಾಪಸ್ ಕರೆಸಿಕೊಂಡು ಇಲ್ಲೇ ಕೆಲಸ ಕೊಡಿ. ನಿಮ್ಮಿಂದ ಇದು ಸಾಧ್ಯವೇ? ಎಲ್ಲ ಧರ್ಮದ 7.5 ಲಕ್ಷ ವಿದ್ಯಾರ್ಥಿಗಳು ಇಸ್ಲಾಂ ದೇಶಗಳಲ್ಲಿ ಓದುತ್ತಿದ್ದಾರೆ. ನೀವು ಈ ದ್ವೇಷದ ರಾಜಕಾರಣವನ್ನು ತಳಮಟ್ಟದಲ್ಲಿ ಮಾಡುತ್ತಿರುವುದು ಏಕೆ? ಇದರಿಂದ ಯಾರಿಗೆ ಲಾಭ ಎಂದು ಬಿಜೆಪಿ ವಿರುದ್ಧ ಪ್ರಿಯಾಂಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version