ಬೆಂಗಳೂರು: ಮುಂದಿನ ಐದು ವರ್ಷ ನಾನೇ ಸಿ.ಎಂ ಎಂದು ಸಿದ್ದರಾಮಯ್ಯ ಹೇಳಿದ ಬೆನ್ನಿಗೇ ಶಾಸಕ ಇಕ್ಬಾಲ್ ಹುಸೇನ್ ಈ ಮಾತನ್ನು ಅಲ್ಲಗೆಳೆಯುವ ಹೇಳಿಕೆ ಕೊಟ್ಟಿದ್ದಾರೆ. ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕೆಂಬುದು 224 ಕ್ಷೇತ್ರದವರ ಬಯಕೆ. ಇನ್ನು ಒಂದುವರೆ ವರ್ಷದಲ್ಲಿ ಡಿಕೆಶಿ ಸಿಎಂ ಆಗಲಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ನಾಯಕರಾದ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದಕ್ಕೆ ಎಲ್ಲಾ ರೀತಿಯ ಅರ್ಹತೆ ಹೊಂದಿದ್ದಾರೆ. ಅವರಿಗೂ ಒಂದು ಅವಕಾಶ ಕೊಡಬೇಕು ಎಂದು ಸಾಕಷ್ಟು ನಾಯಕರು ಮತ್ತು ಕಾರ್ಯಕರ್ತರು ಸಹ ಆಸೆ ಇಟ್ಟುಕೊಂಡಿದ್ದಾರೆ. ಅವರನ್ನು ಸಿ.ಎಂ. ಆಗಿ ನೋಡುವುದು ನಮ್ಮ ಕನಸಾಗಿದೆ. ಒಂದು ಅಥವಾ ಒಂದೂವರೆ ವರ್ಷದ ನಂತರ ಅವರು ಮುಖ್ಯಮಂತ್ರಿ ಆಗುತ್ತಾರೆ. ಇದು ನಮ್ಮೆಲ್ಲರ ಅಭಿಲಾಷೆ ಕೂಡ ಎಂದು ಇಕ್ಬಾಲ್ ಹುಸೇನ್ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯರವರನ್ನು ಹೊಗಳಿದ ಇಕ್ಬಾಲ್, ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಕಳೆದ ಸಲ ಸಿ.ಎಂ ಆಗಿದ್ದ ಅವರು ಉತ್ತಮ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಜನಪರ ಮತ್ತು ಬಡವರ ಪರ ಕೆಲಸ ಮಾಡಿದ್ದಾರೆ ಎಂದರು.
ಸಿ.ಎಂ ಬದಲಾವಣೆ ಬಗ್ಗೆ ಮಾತನಾಡುವವರು ಕೆಲಸಕ್ಕೆ ಬಾರದವರು ಎಂಬ ಸಿದ್ದರಾಮಯ್ಯರವರ ಮಾತಿಗೆ ಪ್ರತಿಕ್ರಿಯಿಸಿದ ಅವರು, ಕೆಲಸಕ್ಕೆ ಬಾರದವರು ಎಂದು ಯಾವ ಶಾಸಕರ ಬಗ್ಗೆಯೂ ಮಾತನಾಡಬಾರದು. ಎಲ್ಲರಿಗೂ ಅವರದ್ದೇ ಆದ ಗೌರವವಿದೆ ಎಂದು ತಿರುಗೇಟು ನೀಡಿದ್ದಾರೆ.