ಗೃಹ ಸಚಿವರ ಮೇಲೆ ರೇಪ್ ಮಾಡಿರುವವರನ್ನು 376 ಸೆಕ್ಷನ್ ಕೇಸ್ ಹಾಕಿ ಬಂಧಿಸಲಿ: ಡಿ.ಕೆ ಶಿವಕುಮಾರ್ ಛೇಡಿಕೆ

Prasthutha|

ಬೆಂಗಳೂರು: ‘ಮೈಸೂರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವಾಗಿದ್ದು, 48 ಗಂಟೆಗಳಾದರೂ ಯಾರ ವಿರುದ್ಧವೂ ಎಫ್ಐಆರ್ ದಾಖಲಾಗದಿರುವುದು ನಾಚಿಕೆಗೇಡಿನ ವಿಚಾರ. ಆದಷ್ಟು ಬೇಗ ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.

- Advertisement -

ಇನ್ನು, ಗೃಹ ಮಂತ್ರಿಗಳು ತಮ್ಮ ಮೇಲೆ ಕಾಂಗ್ರೆಸ್ ನಾಯಕರು ರೇಪ್ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಅದು ಯಾರೇ ಆಗಿರಲಿ ಅವರ ಮೇಲೆ ಐಪಿಸಿ ಸೆಕ್ಷನ್ 376 ಅಡಿಯಲ್ಲಿ ಪ್ರಕರಣ ದಾಖಲಿಸಿ, ಬಂಧಿಸಲಿ’ ಎಂದು ಶಿವಕುಮಾರ್ ಅವರು ಛೇಡಿಸಿದ್ದಾರೆ.

ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮದವರ ಜತೆ ಗುರುವಾರ ಮಾತನಾಡಿದರು.

- Advertisement -

‘ಇಡೀ ವಿಶ್ವವೇ ನಮ್ಮನ್ನು ಗೌರವದಿಂದ ನೋಡುತ್ತಿದೆ.‌ ಪೊಲೀಸ್ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಇಲಾಖೆಯ ಮರ್ಯಾದೆ ಹಾಳು ಮಾಡಬಾರದು ಎಂದು ಈ ಹಿಂದೆ ಹಲವು ಬಾರಿ ಮನವಿ ಮಾಡಿದ್ದೆ. ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ. ಆರೋಪಿಗಳ ರಕ್ಷಣೆಗೆ ನಿಲ್ಲಬೇಡಿ ಎಂದು ನಾನು ವಿಧಾನಸಭೆ ಅಧಿವೇಶನದಲ್ಲೂ ಆಗ್ರಹಿಸಿದ್ದೆ. ಮಾಧ್ಯಮಗಳ ಮುಂದೆಯೂ ಹೇಳಿದ್ದೆ. ಆದರೆ ಈ ಸರಕಾರ ಬೇಜವಾಬ್ದಾರಿ ಮೆರೆಯುತ್ತಿದೆ ಎಂದು ಟೀಕಿಸಿದರು.

ಈಗಿರುವ ಗೃಹ ಸಚಿವರ ಕ್ಷೇತ್ರದಲ್ಲಿ, ಬೆಂಗಳೂರಿನಲ್ಲಿ, ಮೈಸೂರಿನಲ್ಲಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಈ ಹಿಂದೆ ಮಂತ್ರಿಯಾಗಿದ್ದವರ ಮೇಲೂ ಅತ್ಯಾಚಾರ ಆರೋಪ ಕೇಳಿಬಂದಿವೆ. ಮೈಸೂರಿನಲ್ಲಿ ಘಟನೆ ನಡೆದು 48 ಗಂಟೆಗಳಾಗಿವೆ. ಆದರೂ ಇದುವರೆಗೂ ಯಾವುದೇ ಎಫ್ಐಆರ್ ದಾಖಲಾಗಿಲ್ಲ, ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವೂ ಆಗಿಲ್ಲ. ಇದಕ್ಕಿಂತ ನಾಚಿಕೆಗೇಡಿನ ವಿಚಾರ ಮತ್ತೊಂದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್ ನವರು ನನ್ನನ್ನು ರೇಪ್ ಮಾಡುತ್ತಿದ್ದಾರೆ ಎಂದು ನೂತನ ಗೃಹ ಸಚಿವರು ಹೇಳಿಕೆ ಕೊಟ್ಟಿದ್ದಾರೆ. ಅವರನ್ನು ಯಾವ ಕಾಂಗ್ರೆಸಿಗರು ರೇಪ್ ಮಾಡಿದ್ದಾರೆ..?! ಗೃಹ ಸಚಿವರ ಮೇಲೆ ಯಾರು ರೇಪ್ ಮಾಡಿದ್ದಾರೋ, ಅದು ಯಾವುದೇ ನಾಯಕರಾಗಿರಲಿ, ಅವರ ಮೇಲೆ ಪೊಲೀಸರು 376 ಕಾಯ್ದೆ ಅನ್ವಯ ದೂರು ದಾಖಲಿಸಿ, ಬಂಧಿಸಲಿ ಎಂದು ನಾನು ಪೊಲೀಸ್ ಮಹಾ ನಿರ್ದೇಶಕರನ್ನು (ಡಿಜಿಪಿ) ಆಗ್ರಹಿಸುತ್ತಿದ್ದೇನೆ. ಅವರ ಬಾಯಲ್ಲಿ ರೇಪ್ ಎಂಬ ಪದ ಇಷ್ಟು ಸಲೀಸಾಗಿ ಬರುತ್ತಿರುವುದನ್ನು ನೋಡಿದರೆ ಅವರಿಗೆ ರೇಪ್ ಎಂಬ ಪದದ ಮೇಲೆ ಎಷ್ಟು ಪ್ರೀತಿ ಇದೆ ಎಂಬುದು ಗೊತ್ತಾಗುತ್ತದೆ. ಈ ವಿಚಾರವಾಗಿ ನಾನು ಗೃಹ ಸಚಿವರಿಂದ ಯಾವುದೇ ಉತ್ತರ ನಿರೀಕ್ಷಿಸುವುದಿಲ್ಲ. ಅವರ ಪಕ್ಷದ ಎಲ್ಲ ನಾಯಕರೂ ಅವರ ಹೇಳಿಕೆಗೆ ಉತ್ತರಿಸಬೇಕು. ಕಾಂಗ್ರೆಸ್ ಗೃಹ ಸಚಿವರನ್ನೇ ರೇಪ್ ಮಾಡುತ್ತಿದೆ ಎನ್ನುವುದಾದರೇ ಇವರ ಆಡಳಿತ ಯಾವ ಹಂತಕ್ಕೆ ಬಂದು ನಿಂತಿದೆ ಎಂದು ಕುಟುಕಿದರು.

ಇವರಿಗೆ ನಾವು ಸಹಕಾರ ನೀಡಬೇಕಂತೆ. ಯಾವ ಸಹಕಾರ ನೀಡಬೇಕು? ಸರಕಾರ ಎಸ್ಐಟಿ ತನಿಖಾ ತಂಡ ರಚಿಸಿದೆ. ಅತ್ಯಾಚಾರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಇರೋ ಪೊಲೀಸರು ಮರ್ಯಾದೆ ಕಳೆದುಕೊಂಡಿದ್ದಾರೆ. ಪೊಲೀಸರಿಗೆ ಇಂಥ ದುಸ್ಥಿತಿ ಬರಬಾರದಿತ್ತು. ಇದರಿಂದ ರಾಜ್ಯದ ಘನತೆಗೆ ಧಕ್ಕೆಯಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ನೋವು ವ್ಯಕ್ತಪಡಿಸಿದರು.

ಮೈಸೂರು ದುರ್ಘಟನೆಗೆ ಸಂಬಂಧಿಸಿದಂತೆ ಉಗ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷದ ತನಿಖಾ ಸಮಿತಿ ರಚಿಸಿದ್ದೇವೆ. ಈ ಸಮಿತಿಯಲ್ಲಿ ಎಚ್.ಎಂ ರೇವಣ್ಣ, ಶಾಸಕ ತನ್ವಿರ್ ಸೇಠ್, ರೂಪಾ ಶಶಿಧರ್, ಮಲ್ಲಜಮ್ಮ, ಮಾನಸ ಮಂಜುಳಾ, ಮಂಜುಳಾ ನಾಯ್ಡು ಅವರು ಇದ್ದಾರೆ. ಈ ಸಮಿತಿ ಕೂಡಲೇ ಮೈಸೂರಿಗೆ ಹೋಗಿ, ಪ್ರಕರಣದ ತನಿಖೆ ಮಾಡಿ ವರದಿ ಸಲ್ಲಿಸಲು ಸೂಚಿಸಿದ್ದೇನೆ. ಇನ್ನು ಗೃಹ ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳು ಅತ್ಯಾಚಾರ ಸಂತ್ರಸ್ಥೆಯ ಗುರುತನ್ನು ಬಹಿರಂಗಪಡಿಸಿದ್ದು, ಮುಖ್ಯಮಂತ್ರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಿ ದಾಖಲೆ ಸರಿಪಡಿಸಬೇಕು ಎಂದು ಶಿವಕುಮಾರ್ ಆಗ್ರಹಿಸಿದರು.

ಈ ಸರ್ಕಾರ ನಮ್ಮ ರಾಜ್ಯವನ್ನು ನೀಚ ಸಂಸ್ಕೃತಿಗೆ ತೆಗೆದುಕೊಂಡು ಹೋಗುತ್ತಿದ್ದು, ಇದನ್ನು ನಾವು ಖಂಡಿಸುತ್ತೇವೆ. ಸಂತ್ರಸ್ಥರಿಗೆ ನ್ಯಾಯ ಒದಗಿಸಿಕೊಡಲು ಪೊಲೀಸರು ಕೆಲಸ ಮಾಡಬೇಕು. ಈ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ. ನಮ್ಮಲ್ಲಿ ಚಾಣಾಕ್ಷ ಪೊಲೀಸರಿದ್ದಾರೆ. ಅನೇಕ ಕ್ಲಿಷ್ಟ ಪ್ರಕರಣಗಳನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿದ್ದಾರೆ. ನನಗಿರುವ ಅಲ್ಪ ಪ್ರಮಾಣದ ಮಾಹಿತಿಯಲ್ಲಿ ರೇಪ್ ಆದ ಸಮಯದಲ್ಲಿ ಆ ಪ್ರದೇಶದ ಸುತ್ತಮುತ್ತಲಿನಲ್ಲಿರುವ ಮೊಬೈಲ್ ಟವರ್ ಮೂಲಕ ಯಾರ್ಯಾರು ಆ ಪ್ರದೇಶದಲ್ಲಿ ಇದ್ದರು ಎಂಬ ಜಾಡು ಹಿಡಿದರೆ ಈ ದುಷ್ಕೃತ್ಯ ಮಾಡಿದವರನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಬಹುದು. ಆದರೆ 48 ಗಂಟೆಗಳಾದರೂ ಈ ಸರ್ಕಾರ ಯಾರನ್ನೂ ಬಂಧಿಸಿಲ್ಲ. ಮಾಧ್ಯಮಗಳಲ್ಲಿ ಈ ವಿಚಾರ ಪ್ರಸ್ತಾಪವಾದ ನಂತರ ಸರ್ಕಾರ ಈ ವಿಚಾರವಾಗಿ ಕಣ್ಣು ಬಿಡಲಾರಂಭಿಸಿದೆ. ಇದು ಸರಕಾರದ ಅಸಡ್ಡೆಗೆ ಸಾಕ್ಷಿ ಎಂದು ಆರೋಪಿಸಿದರು.

ಮಾಜಿ ಸಂಸದ ವಿ.ಎಸ್ ಉಗ್ರಪ್ಪ, ಮಾಜಿ ಸಚಿವರಾದ ಎಚ್.ಎಂ ರೇವಣ್ಣ, ಮೋಟಮ್ಮ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಹಿಳಾ ಹೋರಾಟಗಾರ್ತಿ ಮಂಜುಳಾ ನಾಯ್ಡು, ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಸಂಚಾಲಕರಾದ ರಾಮಚಂದ್ರಪ್ಪ, ಸಲೀಂ ಮತ್ತಿತರರು ಉಪಸ್ಥಿತರಿದ್ದರು.

Join Whatsapp