Home ಟಾಪ್ ಸುದ್ದಿಗಳು ದೇವೇಗೌಡರೇ, ನಿಮ್ಮ ಸುಪುತ್ರ ಪದೇ ಪದೆ ಪಕ್ಷ ವಿಸರ್ಜನೆ, ರಾಜಕೀಯ ನಿವೃತ್ತಿ ಘೋಷಿಸಿದರೆ ಕಾರ್ಯಕರತರು ಎಲ್ಲಿ...

ದೇವೇಗೌಡರೇ, ನಿಮ್ಮ ಸುಪುತ್ರ ಪದೇ ಪದೆ ಪಕ್ಷ ವಿಸರ್ಜನೆ, ರಾಜಕೀಯ ನಿವೃತ್ತಿ ಘೋಷಿಸಿದರೆ ಕಾರ್ಯಕರತರು ಎಲ್ಲಿ ಹೋಗಬೇಕು?: ಡಿ.ಕೆ. ಶಿವಕುಮಾರ್

ಬೆಂಗಳೂರು: “ಪೂಜನೀಯ ದೇವೇಗೌಡರೇ, ನಿಮ್ಮ ಸುಪುತ್ರರು ಪದೇ ಪದೆ ಜೆಡಿಎಸ್ ವಿಸರ್ಜನೆ ಮಾಡುತ್ತೇನೆ, ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದರೆ ಪಕ್ಷದ ನಾಯಕರು, ಕಾರ್ಯಕರ್ತರು ಎಲ್ಲಿ ಹೋಗಬೇಕು? ನಿಮ್ಮ ಸುಪುತ್ರರು ದಿನಬೆಳಗಾದರೆ ಸಿದ್ಧಾಂತ ಬದಲಿಸುತ್ತಾರೆ, ಯಾರ ಜೊತೆ ಬೇಕಾದರೂ ಸಂಬಂಧ ಬೆಳೆಸುತ್ತಾರೆ. ಆದರೆ ಸಿದ್ಧಾಂತ ನಂಬಿರುವ ಕಾರ್ಯಕರ್ತರು ಏನಾಗಬೇಕು?” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಜೆಡಿಎಸ್ ವರಿಷ್ಠ ದೇವೇಗೌಡರನ್ನು ಪ್ರಶ್ನಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿ ಕೆ ಶಿವಕುಮಾರ್ ಮಾತನಾಡಿದರು.

“ಮಿಸ್ಟರ್ ಡಿ ಕೆ ಶಿವಕುಮಾರ್ ನಿಮ್ಮ ಆಟ ನಡೆಯಲ್ಲ” ಎಂದು ತಮಗೆ ಎಚ್ಚರಿಕೆ ಕೊಟ್ಟಿರುವ ದೇವೇಗೌಡರನ್ನು ಶಿವಕುಮಾರ್ ಅವರು ಹೀಗೆ ವಿನಯಪೂರ್ವಕವಾಗಿ ಪ್ರಶ್ನಿ ಮಾಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು:

“ಮಹಾತ್ಮಗಾಂಧಿ ಜನ್ಮದಿನದಂದು ನಮ್ಮ ಪಕ್ಷದ ಸಿದ್ಧಾಂತ ನಂಬಿ ಬಂದಿರುವ ಜೆಡಿಎಸ್ ಮುಖಂಡರು, ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ. ರಾಜ್ಯಾದ್ಯಂತ ಮೂಲೆ ಮೂಲೆಯಿಂದ ಸಾವಿರಾರು ಮಂದಿ ಪಕ್ಷ ಸೇರಲು ಮುಂದಾಗಿದ್ದಾರೆ.

ಈ ಮಧ್ಯೆ ಮಾಜಿ ಪ್ರಧಾನಿ ದೇವೇಗೌಡರು ನನಗೆ ಎಚ್ಚರಿಕೆ ಕೊಟ್ಟಿದ್ದಾರೆ. ‘ಮಿಸ್ಟರ್ ಡಿ.ಕೆ. ಶಿವಕುಮಾರ್ ನಿಮ್ಮ ಆಟ ನಡೆಯುವುದಿಲ್ಲ’ ಎಂದು ಹೇಳಿದ್ದಾರೆ. ದೇವೇಗೌಡರರು ದೊಡ್ಡವರು. ಬಹಳ ಗೌರವದಿಂದ ಅವರ ಮಾತನ್ನು ನಾನು ಸಂತೋಷದಿಂದ ಸ್ವೀಕರಿಸುತ್ತೇನೆ. ಪೂಜನೀಯ ದೇವೇಗೌಡರೇ, ನೀವು ಮತ್ತು ನಿಮ್ಮ ಪಕ್ಷದ ನಾಯಕರು ಅನೇಕ ಬಾರಿ ಬಿಜೆಪಿ ಜೊತೆ ಕೈ ಜೋಡಿಸುವುದಿಲ್ಲ ಎಂದು ಹೇಳಿದ್ದಿರಿ. ಆದರೆ ಈಗ ಕೈ ಜೋಡಿಸಿದ್ದೀರಿ. ರಾಜಕಾರಣ ಏನೇ ಇರಲಿ, ಬಿಜೆಪಿ ಜತೆ ಮೈತ್ರಿ ಮೂಲಕ ನೀವು ಕಳುಹಿಸಿರುವ ಸಂದೇಶವನ್ನು ಮುಗ್ಧ ಜನ ಹೇಗೆ ಸ್ವೀಕರಿಸಬೇಕು? ಇಂತಹ ಪರಿಸ್ಥಿತಿಯಲ್ಲಿ ಸಿದ್ಧಾಂತ ನಂಬಿ ನಮ್ಮ ಪಕ್ಷಕ್ಕೆ ಬಂದವರನ್ನು ಪಕ್ಷದ ಅಧ್ಯಕ್ಷನಾಗಿ ನಾನು ಕರೆದುಕೊಳ್ಳಬಾರದೇ?

ಈ ಹಿಂದೆ ನೀವು ಕೂಡ ಕಾಂಗ್ರೆಸ್ ನಿಂದ ಅನೇಕ ನಾಯಕರನ್ನು ನಿಮ್ಮ ಪಕ್ಷಕ್ಕೆ ಸೇರಿಸಿಕೊಂಡು ಚೆಸ್, ಫುಟ್ಬಾಲ್ ಗೇಮ್ ಆಡಿಲ್ಲವೇ? ನೀವು ಯಾರನ್ನು ಬೇಕಾದರೂ ಕಟ್ಟಿಹಾಕಿಕೊಳ್ಳಿ, ಮನೆಯೊಳಗೇ ಕೂಡಿ ಹಾಕಿಕೊಳ್ಳಿ. ನಾವು ಬೇಡ ಎನ್ನುವುದಿಲ್ಲ.

ಈ ಹಿಂದೆ ನಮ್ಮ ಪಕ್ಷದಿಂದ ಎಂಎಲ್ಸಿ ಆಗಿದ್ದ ಸಿ.ಎಂ. ಇಬ್ರಾಹಿಂ ಅವರನ್ನು, ಅವರ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಕರೆದುಕೊಂಡು ಹೋಗಿ ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದೀರಿ. ಅವರು ಈಗ ಏನು ಹೇಳಿದ್ದಾರೆ? ಪಕ್ಷದ ಅಧ್ಯಕ್ಷನಾದ ನನಗೇ ಮೈತ್ರಿ ವಿಚಾರ ತಿಳಿಸಲಿಲ್ಲ ಎಂದು ಹೇಳಿದ್ದಾರೆ. ನಿಮ್ಮ ಪಕ್ಷದ ಬಹುತೇಕ ಮುಖಂಡರು, ಕಾರ್ಯಕರ್ತರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅನೇಕರು ಕಾಂಗ್ರೆಸ್ ಕಡೆ ನೋಡುತ್ತಿದ್ದಾರೆ.

ರಾಜ್ಯದ ಪ್ರತಿ ಮನೆ, ಮನೆಗೂ ಹಾಗೂ ಕಾರ್ಯಕರ್ತರ ಬಳಿ ಹೋಗಿ ಕೈ ಮುಗಿದು ದೇಶ ಉಳಿಸೋಣ ಬನ್ನಿ ಎಂದು ಪಕ್ಷಕ್ಕೆ ಸೇರಿಸಿಕೊಳ್ಳುವ ಅಧಿಕಾರವನ್ನು ನಮ್ಮ ನಾಯಕಿ ಸೋನಿಯಾ ಗಾಂಧಿ ಹಾಗೂ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ನಮಗೆ ಕೊಟ್ಟಿದ್ದಾರೆ.

ನಾವು ಎಲ್ಲರಿಗೂ ಗೌರವ ನೀಡುತ್ತೇವೆ. ಈ ಹಿಂದೆ ನೀವು, ಬಿಜೆಪಿಯವರು ಏನು ಮಾಡಿದ್ದೀರಿ ಎಂಬುದು ಇತಿಹಾಸದ ಪುಟದಲ್ಲಿದೆ. ಈ ಡಿ.ಕೆ. ಶಿವಕುಮಾರ್ ಗೆ ಹೆದರಿಸಿದರೆ ನಾನು ಹೆದರುವುದಿಲ್ಲ ಎಂದು ನಿಮಗೆ ಚನ್ನಾಗಿ ಗೊತ್ತಿದೆ. ದೊಡ್ಡ ಇತಿಹಾಸ ಇರುವ ಪಕ್ಷದ ಅಧ್ಯಕ್ಷನಾಗಿ ಪಕ್ಷದ ತತ್ವ ಸಿದ್ಧಾಂತ ನಂಬಿ ಬಂದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಜವಾಬ್ದಾರಿ, ಬದ್ಧತೆ ನನಗಿದೆ.

ನಾನು ಸಾತನೂರು, ಕನಕಪುರದಲ್ಲಿ 1985ರಿಂದ ಇಲ್ಲಿಯವರೆಗೂ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನನ್ನ ಜೊತೆ ನನ್ನ ಸಹೋದರ ಸುರೇಶ್, ತೇಜಸ್ವಿನಿ ಅವರೂ ರಾಜಕಾರಣ ಮಾಡಿದ್ದಾರೆ. ಬೆದರಿಕೆಗೆ ಈ ಡಿ.ಕೆ. ಶಿವಕುಮಾರ್ ಹೆದರುವುದಿಲ್ಲ ಎಂದು ನಿಮಗೂ ಗೊತ್ತಿದೆ. ನಾವು ನಿಮ್ಮ ಜತೆಯೂ ಕೈ ಜೋಡಿಸಿದ್ದೇವೆ, ನಿಮಗೂ ಶಕ್ತಿ ತುಂಬಿದ್ದೇವೆ. ಯಾವ ಸಂದರ್ಭದಲ್ಲಿ ಯಾರು ಏನು ಮಾತನಾಡಿದ್ದಾರೆ ಎಂಬ ಅರಿವು ನಮಗಿದೆ. ಹಳೆಯದನ್ನು ಕೆದಕಿ ಉತ್ತರ ಕೊಡುವ ಅಗತ್ಯವಿಲ್ಲ. ನೀವು ಎಷ್ಟು ವಾರ್ನಿಂಗ್ ಕೊಟ್ಟರೂ ನಿಮ್ಮ ಸುಪುತ್ರರ ಕ್ಷೇತ್ರದಲ್ಲಿ ನಿಮ್ಮನ್ನು ಸಾಕಿ ಬೆಳೆಸಿದ ಜನ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಬಂದಿದ್ದಾರೆ. ಇಲ್ಲಿ ಬಂದಿರುವ ಎಲ್ಲರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ” ಎಂದು ತಿಳಿಸಿದರು.

“ಇಲ್ಲಿ ಪಕ್ಷ ಸೇರಲು ಬಂದಿರುವ ನೀವು ನಮ್ಮ ಪ್ರತಿನಿಧಿಯಾಗಿ ಬಂದಿದ್ದೀರಿ. ನಿಮ್ಮ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಪ್ರವಾಸ ಮಾಡಿ, ಪ್ರತಿಯೊಬ್ಬರು ಕನಿಷ್ಠ 20ಕ್ಕೂ ಹೆಚ್ಚು ಜನರನ್ನು ಪಕ್ಷಕ್ಕೆ ಕರೆದುಕೊಂಡು ಬನ್ನಿ. ನೀವು ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದೀರಿ. ನಿಮ್ಮ ಜತೆ ನಿಮ್ಮ ಕ್ಷೇತ್ರದ ಜನ ಮಾತ್ರವಲ್ಲ ರಾಜ್ಯದ ಮೂಲೆ ಮೂಲೆಯಿಂದ ಅನೇಕ ಕಾರ್ಯಕರ್ತರು ಇದ್ದಾರೆ.

The ballot is stronger than the bullet ಎಂಬಂತೆ ನೀವು ಅವರ ಬುಲೆಟ್ ಮಾತುಗಳಿಗೆ ಹೆದರದೆ, ಬ್ಯಾಲೆಟ್ ಮೂಲಕ ಉತ್ತರ ನೀಡಿ.

ನಿನ್ನೆ ಕುಮಾರಸ್ವಾಮಿ ಅವರು ಬಿಜೆಪಿ ಮೈತ್ರಿಯಿಂದ ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ರಾಜಕೀಯ ನೀವೃತ್ತಿ ಘೋಷಿಸುವುದಾಗಿ ಹೇಳಿದ್ದಾರೆ. ಪಕ್ಷದ ದಂಡನಾಯಕನಾಗಿ ಎಷ್ಟು ಬಾರಿ ನಿವೃತ್ತಿ ಘೋಷಿಸುತ್ತೀರಿ. ನಿಮ್ಮನ್ನು ನಂಬಿರುವ ನಾಯಕರು ಕಾರ್ಯಕರ್ತರು ಏನಾಗಬೇಕು? ನೀವು ದಿನಬೆಳಗಾದರೆ ಯಾರ ಜತೆ ಬೇಕಾದರೂ ಸಂಬಂಧ ಬೆಳೆಸಬಹುದು. ಆದರೆ ಸಿದ್ಧಾಂತದ ಮೇಲೆ ರಾಜಕಾರಣ ಮಾಡುವ ನಾಯಕರು, ಕಾರ್ಯಕರ್ತರು ಏನಾಗಬೇಕು?

ನಾನು ಯಾರನ್ನು ನಮ್ಮ ಪಕ್ಷಕ್ಕೆ ಬನ್ನಿ ಎಂದು ಕರೆಯುವ ಅಗತ್ಯವಿಲ್ಲ, ಸಾಗರೋಪಾದಿಯಲ್ಲಿ ಬೇರೆ ಪಕ್ಷಗಳ ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಆಗಮಿಸುತ್ತಿದ್ದಾರೆ. ಬೀದರ್ ನಿಂದ ಚಾಮರಾಜನಗರದವರೆಗೂ ಯಾವುದೇ ಜಿಲ್ಲೆಯಲ್ಲಿನ ನಾಯಕರು ಪಕ್ಷ ಸಿದ್ಧಾಂತ ಒಪ್ಪಿ ಬಂದರೆ ನಮ್ಮ ಪಕ್ಷಕ್ಕೆ ಸ್ವಾಗತ. ಈ ಪಕ್ಷ ಯಾವುದೇ ಒಬ್ಬ ವ್ಯಕ್ತಿಯ ಮೇಲೆ ನಿಂತಿಲ್ಲ. ನಾನು ಇಲ್ಲದಿದ್ದರೂ ನಮ್ಮ ಪಕ್ಷ ಮುಂದುವರಿಯಲಿದೆ”.

Join Whatsapp
Exit mobile version