ಮಂಗಳೂರು: ನ್ಯಾಯಾಲಯದಿಂದ ಸಾಕ್ಷ್ಯ ಹೇಳಲು ನೋಟೀಸ್ ಪಡೆದ ಹಿನ್ನೆಲೆ ನ್ಯಾಯಾಧೀಶರ ಮುಂದೆ ಹಾಜರಾಗುವ ಉದ್ದೇಶದಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಂಗಳೂರಿಗೆ ಆಗಮಿಸಿದ್ದಾರೆ. ಬೆಳಿಗ್ಗೆ ವಿಮಾನ ಮೂಲಕ ಬಂದಿಳಿದ ಪಕ್ಷದ ಅಧ್ಯಕ್ಷರನ್ನು ಮಾಜಿ ಸಚಿವ ರಮಾನಾಥ ರೈ, ಅಭಯಚಂದ್ರ ಜೈನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮತ್ತಿತ್ತರರು ಸ್ವಾಗತಿಸಿದರು.
ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಲಿರುವ ಅವರು, ಬಳಿಕ ಮಧ್ಯಾಹ್ನ ಕುಕ್ಕೆ ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ನಂತರ ರಾತ್ರಿ 8 ಗಂಟೆ ಸಮಯಕ್ಕೆ ವಾಪಸ್ ಬೆಂಗಳೂರಿಗೆ ತೆರಳಲಿದ್ದಾರೆ. ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುತ್ತಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ವಿದ್ಯುತ್ ಸಮಸ್ಯೆ ಬಗ್ಗೆ ಬಳ್ಳಾರಿಯ ಸಾಯಿ ಗಿರಿಧರ್ ಮತ್ತು ಡಿಕೆಶಿ ಫೋನಿನಲ್ಲಿ ಮಾತನಾಡುವಾಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಘಟನೆ ಕುರಿತು ಡಿ.ಕೆ.ಶಿವಕುಮಾರ್ ಸೂಚನೆಯಂತೆ ಮೆಸ್ಕಾಂ ಅಧಿಕಾರಿಗಳು ದೂರು ದಾಖಲಿಸಿದ್ದರು. ಘಟನೆ ಸಂಬಂಧ ಸಾಕ್ಷ್ಯ ಹೇಳಲು ಡಿಕೆ ಶಿವಕುಮಾರ್ ನ್ಯಾಯಾಲಯದ ಮುಂದೆ ಹಾಜರಾಗುತ್ತಿದ್ದಾರೆ.