Home ಟಾಪ್ ಸುದ್ದಿಗಳು ಅಗತ್ಯ ವಸ್ತುಗಳ ಬೆಲೆ ಇಳಿಸದಿದ್ದರೆ, ಮುಂದಿನ ಚುನಾವಣೆಗಳಲ್ಲಿಯೂ ಬಿಜೆಪಿಗೆ ಮತದಾರರಿಂದ ತಕ್ಕ ಉತ್ತರ: ಡಿಕೆಶಿ

ಅಗತ್ಯ ವಸ್ತುಗಳ ಬೆಲೆ ಇಳಿಸದಿದ್ದರೆ, ಮುಂದಿನ ಚುನಾವಣೆಗಳಲ್ಲಿಯೂ ಬಿಜೆಪಿಗೆ ಮತದಾರರಿಂದ ತಕ್ಕ ಉತ್ತರ: ಡಿಕೆಶಿ

ಹುಬ್ಬಳ್ಳಿ: ಉಪ ಚುನಾವಣೆಯಲ್ಲಿ ಮತದಾರರ ಉತ್ತರ ನೋಡಿ ಬೊಮ್ಮಾಯಿ ಸಾಹೇಬರು, ಮೋದಿ ಸಾಹೇಬರು ಪೆಟ್ರೋಲ್, ಡೀಸೆಲ್ ಬೆಲೆ ಕಮ್ಮಿ ಮಾಡಿದ್ದಾರೆ. ಅವರಿಗೆ ಈಗ ತಿಳುವಳಿಕೆ ಬಂದಿದ್ದು, ಇನ್ನು ಗ್ಯಾಸ್, ಕಬ್ಬಿಣ, ಸೀಮೆಂಟ್, ದಿನಬಳಕೆ ವಸ್ತು, ಅಡುಗೆ ಎಣ್ಣೆ ಬೆಲೆ ಇಳಿಸದಿದ್ದರೆ, ಮುಂಬರುವ ಚುನಾವಣೆಗಳಲ್ಲಿ ಮತದಾರರಿಂದ ಇದೇ ಉತ್ತರ ಬರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.


ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಮತದಾರರ ಮೇಲೆ ಸಂಪೂರ್ಣ ನಂಬಿಕೆ ಇತ್ತು. ಸರಕಾರ ನಿತ್ಯ ಜನರ ಜೇಬನ್ನು ಪಿಕ್ ಪಾಕೆಟ್ ಮಾಡುತ್ತಿತ್ತು. ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದರು. ರೈತರು ಬಳಲಿದ್ದರು. ಕಾರ್ಮಿಕರು, ಬೀದಿ ವ್ಯಾಪಾರಿಗಳು ಪರಿಹಾರಕ್ಕೆ ಕಾದು ಕುಳಿತಿದ್ದರು. ಆದರೆ ಇದ್ಯಾವುದೂ ಜನರಿಗೆ ತಲುಪಲಿಲ್ಲ. ನಾನು ಪ್ರಚಾರದ ವೇಳೆ ಯಾವುದೇ ಬೋಧನೆ ಮಾಡಲಿಲ್ಲ. ಮತದಾರರಿಗೆ ಈ ವಿಚಾರವಾಗಿ ಕೆಲವು ಪ್ರಶ್ನೆ ಕೇಳಿದೆ. ಪರಿಹಾರ ತಲುಪಿದೆಯಾ? ಸರ್ಕಾರದಿಂದ ಸಹಾಯವಾಗಿದೆಯಾ, ಇಲ್ಲವಾ? ನಿಮ್ಮ ಜೀವನದಲ್ಲಿ ಬದಲಾವಣೆ ಆಗಿದೆಯಾ ಇಲ್ಲವಾ? ರೈತರ ಆದಾಯ ಡಬಲ್ ಆಗಿದೆಯಾ? ಎಂದು ಕೇಳಿದಾಗ ಅವರು ಇಲ್ಲ ಎಂದರು. ಇದಕ್ಕೆ ಉತ್ತರ ಕೊಡಬೇಕಲ್ಲವೇ ಎಂದು ಕೇಳಿದ್ದೆ. ಅವರು ಈಗ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು.


ಈ ಬಾರಿಯ ಅಭಿನಂದನಾ ಸಮಾವೇಶ 2023 ರ ಚುನಾವಣಾ ಪ್ರಚಾರಕ್ಕೆ ನಾಂದಿಯೇ? ಎಂಬ ಪ್ರಶ್ನೆಗೆ, ‘ನನ್ನ ಗುರಿ 2023. ಮೊದಲು ಗ್ರಾಮ ದೇವತೆಗೆ ಪೂಜೆ ಸಲ್ಲಿಸಬೇಕು. ನಾನು ನಾಮಪತ್ರ ಸಲ್ಲಿಸಲು ಹೋದಾಗ ಮನಸ್ಸಿಗೆ ತೃಪ್ತಿಯಾಗಿರಲಿಲ್ಲ. ನಂತರ ಮತ್ತೆ ಹೋಗಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದೆ. ದರ್ಗಾಕ್ಕೂ ಭೇಟಿ ನೀಡಿದ್ದೆವು. ನಾನು ಆ ತಾಯಿಗೆ ಹರಕೆ ತೀರಿಸುತ್ತೇನೆ. ಇದು ಭಕ್ತ ಹಾಗೂ ಭಗವಂತನ ವಿಚಾರ. ನಂತರ ಪಕ್ಷದ ಪರವಾಗಿ ಅಭಿನಂದನಾ ಸಭೆ ಮಾಡುತ್ತೇವೆ ಎಂದರು. ಎಲ್ಲ ಜನಾಂಗ, ಧರ್ಮದವರು ನಮ್ಮ ಕೈ ಹಿಡಿದಿದ್ದಾರೆ. ಅದಕ್ಕಾಗಿ ಅವರಿಗೆ ನಮಿಸುತ್ತಿದ್ದೇನೆ. ವಾಸ್ತವ ಸ್ಥಿತಿ ಜನರಿಗೆ ತೋರಿದ ಮಾಧ್ಯಮಗಳಿಗೂ ಅಭಿನಂದನೆ ಎಂದರು.


ಹಾನಗಲ್ ನಲ್ಲಿ ನಾವು ಸೋತಿದ್ದರೂ ಸಿಂದಗಿಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಮೊದಲು ಅವರ ಸ್ಥಿತಿ ಬಗ್ಗೆ ಯೋಚಿಸಿ, ಆನಂತರ ಬಿಜೆಪಿಯವರನ್ನು ಸೇರಿಸಿಕೊಳ್ಳುವ ಬಗ್ಗೆ ಯೋಚಿಸಲಿ ಎಂಬ ಮುಖ್ಯಮಂತ್ರಿಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಅವರ ಹೇಳಿಕೆಗೆ ಬಹಳ ಸಂತೋಷ. ನಾವು ಬೆಳಗಾವಿಯಲ್ಲಿ ಸ್ವಲ್ಪ ಅಂತರದಲ್ಲಿ ಸೋತಿದ್ದರೂ ಮಸ್ಕಿಯಲ್ಲಿ 31 ಸಾವಿರ ಅಂತರದಲ್ಲಿ ಗೆದ್ದಿದ್ದೆವು. ಈಗ ಜನತಾದಳದ ಸೀಟನ್ನು ಅವರು ಗೆದ್ದಿದ್ದಾರೆ. ಹಾನಗಲ್ ನ ಬಿಜೆಪಿ ಸೀಟು ನಾವು ಗೆದ್ದಿದ್ದೇವೆ. ಹಾನಗಲ್ ನನ್ನ ಮನೆ, ನಾನು ಊರಿನ ಅಳಿಯ ಎಂದು ಸಿಎಂ ಅವರು ಹೇಳಿದ್ದರು. ತಮ್ಮ ಸಂಪುಟದ ಎಲ್ಲ ಮಂತ್ರಿಗಳನ್ನು ಅವರೇ ಇಲ್ಲಿ ತಂದು ಬಿಟ್ಟಿದ್ದರು. ನಿಮ್ಮ ಪ್ರಶ್ನೆಗೆ ನಾನು ಈ ವಿಚಾರಗಳನ್ನು ನೆನಪು ಮಾಡಲು ಬಯಸುತ್ತೇನೆ’ ಎಂದರು.


ಬಿಜೆಪಿ ನಾಯಕರು ಈ ಚುನಾವಣೆ ಯಾವುದೇ ದಿಕ್ಸೂಚಿ ಅಲ್ಲ ಎನ್ನುತ್ತಾರೆ ಎಂಬ ಪ್ರಶ್ನೆಗೆ, ‘ಅದು ಅವರು ಸೋಲನ್ನು ಒಪ್ಪಿಕೊಳ್ಳುವ ರೀತಿ. ಚುನಾವಣೆಗೂ ಮುನ್ನ ಈ ಹೇಳಿಕೆ ಮೂಲಕ ಮುಖ್ಯಮಂತ್ರಿಗಳು ಸೋಲು ಒಪ್ಪಿಕೊಂಡಿದ್ದರು ಎಂದು ನಾನು ಈ ಹಿಂದೆಯೇ ಹೇಳಿದ್ದೆ, ಅವರ ಹೇಳಿಕೆಯನ್ನು ಗೌರವಿಸಿದ್ದೆ’ ಎಂದು ಪ್ರತಿಕ್ರಿಯಿಸಿದರು.

ಈ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ, ‘ಖಂಡಿತಾ, ಈ ಫಲಿತಾಂಶ ಪರಿಣಾಮ ಬೀರಿರುವುದರಿಂದಲೇ ರಾತ್ರೋರಾತ್ರಿ ಇಂಧನ ಬೆಲೆ ಇಳಿಸಿದ್ದಾರೆ. ನಿರಂತರವಾಗಿ ಬೆಲೆ ಏರಿಸಿ ಈಗ 10 ರೂ. ಇಳಿಸಿದ್ದಾರೆ’ ಎಂದು ಛೇಡಿಸಿದರು.


ಬಿಟ್ ಕಾಯಿನ್ ವಿಚಾರವಾಗಿ ಸರ್ಕಾರ ಹಾಗೂ ವಿರೋಧ ಪಕ್ಷಗಳು ಗಾಳಿಯಲ್ಲಿ ಗುಂಡು ಹೊಡೆಯುತ್ತಿರುವುದೇಕೆ? ಎಂಬ ಪ್ರಶ್ನೆಗೆ, ‘ನಾನು ಯಾವ ರಾಜಕಾರಣಿಗಳ ಬಗ್ಗೆಯೂ ಮಾತನಾಡುತ್ತಿಲ್ಲ. ಅವರು ಪ್ರಕರಣದ ತನಿಖೆಯನ್ನು ಇಡಿ, ಸಿಬಿಐಗೆ ವಹಿಸಿರುವುದಾಗಿ ಹೇಳುತ್ತಿದ್ದಾರೆ. ಅದರ ಪತ್ರವನ್ನು ಸಾರ್ವಜನಿಕರಿಗೆ ಬಹಿರಂಗ ಪಡಿಸಲಿ’ ಎಂದು ಸ್ಪಷ್ಟವಾಗಿ ಹೇಳಿದರು.


ಕೇಂದ್ರ ಸರ್ಕಾರ ಕಚ್ಛಾತೈಲದ ಮೇಲಿನ ಅಬಕಾರಿ ಸುಂಕ ಮತ್ತಷ್ಟು ಕಡಿಮೆ ಮಾಡಬೇಕು ಎಂದು ರಾಜಸ್ಥಾನ ಸಿಎಂ ಗೆಹ್ಲೋಟ್ ಅವರ ಹೇಳಿಕೆ ಕುರಿತಾಗಿ ಕೇಳಿದ ಪ್ರಶ್ನೆಗೆ, ‘ಯುಪಿಎ ಸರ್ಕಾರ ಇದ್ದಾಗ ಬಿಜೆಪಿಯವರು ಪೆಟ್ರೋಲ್ ಬೆಲೆ 50 ರೂ. ಆಗಬೇಕು ಎಂದಿದ್ದರು. ಈಗ ತೆರಿಗೆಯಿಂದಲೇ 35 ರಿಂದ 40 ರೂ. ಕಲೆಹಾಕಲಾಗುತ್ತಿದೆ. ಇದು ಕಡಿಮೆ ಆಗಬೇಕು. ಕಚ್ಚಾತೈಲ ಬೆಲೆಗೆ ಅನುಗುಣವಾಗಿ ಪೆಟ್ರೋಲ್, ಡೀಸೆಲ್ ದರ ನಿಗದಿಯಾಗಬೇಕು. ಕಚ್ಚಾತೈಲ ಬೆಲೆ ಕುಸಿದಾಗ ಬೆಲೆ ಇಳಿಸದ ಪರಿಣಾಮ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಲಾಭ ಮಾಡಿಕೊಂಡಿದೆ. ಜನರಿಂದ ಹಣ ಕಲೆಹಾಕಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ದರವನ್ನು ಕನಿಷ್ಠ 25 ರೂ. ಆದರೂ ಕಡಿಮೆ ಮಾಡಬೇಕು. ಅಡುಗೆ ಅನಿಲ ಸಿಲಿಂಡರ್ ಬೆಲೆ 500 ರೂ.ಗೆ ನಿಲ್ಲಬೇಕು. ಇದು ಕಾಂಗ್ರೆಸ್ ಪಕ್ಷದ ಆಗ್ರಹ’ ಎಂದು ಹೇಳಿದರು.

Join Whatsapp
Exit mobile version