Home ಟಾಪ್ ಸುದ್ದಿಗಳು ದೇಶದ ಮುಂದೆ ರಾಜ್ಯದ ಮಾನ ಹರಾಜಾಗುತ್ತಿದೆ : ಡಿ.ಕೆ ಶಿವಕುಮಾರ್ ಆಕ್ರೋಶ

ದೇಶದ ಮುಂದೆ ರಾಜ್ಯದ ಮಾನ ಹರಾಜಾಗುತ್ತಿದೆ : ಡಿ.ಕೆ ಶಿವಕುಮಾರ್ ಆಕ್ರೋಶ

ಬೆಂಗಳೂರು : ಇಡೀ ದೇಶದ ಮುಂದೆ ರಾಜ್ಯದ ಮಾನ ಹರಾಜಾಗುತ್ತಿದೆ. ಈ ಸಮಯದಲ್ಲಿ ನಾವು ಜನರ ಜತೆ ಇರಬೇಕು. ಜನರ ನೋವು, ಕಷ್ಟಗಳ ಜೊತೆ ಅವರಿಗೆ ಧ್ವನಿಯಾಗಿರಬೇಕು ಎಂದು ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕೆಲವು ಮೃತ ದೇಹಗಳನ್ನು ಯಾರೂ ತೆಗೆದುಕೊಂಡು ಹೋಗದ ಕಾರಣ ಪೊಲೀಸ್ ಅಧಿಕಾರಿಗಳು ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ ಎಂದು ತಿಳಿಯಿತು. ಜನರ ಆಕ್ರಂದನ ವಿಪರೀತ ಆಗುತ್ತಿದೆ. ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ 24 ಮಂದಿ ಸಾವನ್ನಪ್ಪಿದ್ದಾರೆ ಎಂದು ಲೆಕ್ಕ ಇದೆ. ಬೇರೆ ಕಡೆಗಳಲ್ಲಿ ಇದೇ ರೀತಿ ಜನ ಸಾಯುತ್ತಿರುವುದನ್ನು ನೋಡುತ್ತಿದ್ದೇವೆ. ಈ ಬಗ್ಗೆ ಜನರೇ ಮಾಹಿತಿ ನೀಡಿದ್ದಾರೆ ಎಂದರು.

ಅನೇಕರು ಕೋವಿಡ್ ಆತಂಕದಿಂದ ಸಾಯುತ್ತಿದ್ದಾರೆ. ನಿನ್ನೆ ರಾಜರಾಜೇಶ್ವರಿ ನಗರ ಮೆಡಿಕಲ್ ಕಾಲೇಜಿನಲ್ಲಿ ಆಕ್ಸಿಜನ್ ಕೊರತೆ ಇದ್ದಾಗ ಸಂಸದ ಡಿ.ಕೆ. ಸುರೇಶ್ ಅವರು ಮಧ್ಯಪ್ರವೇಶಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ ಕಾರಣ, ಆಕ್ಸಿಜನ್ ಪೂರೈಸಲಾಯಿತು. ನಾವು ಜಾಗೃತರಾಗದಿದ್ದರೆ ಜನರನ್ನು ಕಳೆದುಕೊಳ್ಳಬೇಕಾಗುತ್ತದೆ. ಈಗ ರಾಜಕಾರಣ ಮುಖ್ಯ ಅಲ್ಲ. ಪ್ರತಿಯೊಬ್ಬರನ್ನು ಉಳಿಸಿ, ಆ ಕುಟುಂಬಕ್ಕೆ ಧೈರ್ಯ ತುಂಬಬೇಕು ಎಂದು ಅವರು ಹೇಳಿದರು.

ಈಗ ಯುವಕರು ಹೆಚ್ಚಾಗಿ ಸಾಯುತ್ತಿರುವುದು ಬಹಳ ಶೋಚನೀಯ. ನಾವು ಈ ಪರಿಸ್ಥಿತಿಯಲ್ಲಿ ಜಾಗೃತರಾಗಿರಬೇಕು. ಆಗ ಮಾತ್ರ ಜೀವ ಉಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡೋಣ. ರಾಜ್ಯ 1750 ಟನ್ ಆಕ್ಸಿಜನ್ ಬೇಡಿಕೆಯನ್ನು ಕೇಂದ್ರದ ಮುಂದಿಟ್ಟಿತ್ತು. ಕೇಂದ್ರ 850 ಟನ್ ಕೊಟ್ಟಿದೆ. ಎಲ್ಲವನ್ನೂ ಕೇಂದ್ರ ಸರ್ಕಾರ ನಿಯಂತ್ರಣ ಮಾಡುತ್ತಿದೆ ಎಂದು ಆರೋಪಿಸಿದರು.

ಆರೋಗ್ಯ ಸಚಿವರ ರಾಜೀನಾಮೆ ಮಾತ್ರವಲ್ಲ, ಈ ಸರ್ಕಾರವೇ ಹೋಗಬೇಕು. 33 ಜನ ಸಚಿವರು ತಾವು ಉಸ್ತುವಾರಿ ಹೊತ್ತಿರುವ ಜಿಲ್ಲೆಗಳಿಗೆ ಹೋಗಲಿಲ್ಲ ಎಂದರೆ ಹೇಗೆ? ಸಚಿವ ಸುರೇಶ್ ಕುಮಾರ್ ಸತ್ತವರ ಕುಟುಂಬಕ್ಕೆ ಧೈರ್ಯ ತುಂಬಿದ್ದಾರಾ? ಅವರಿಗೆ ಆಗಲಿಲ್ಲ ಅಂದರೆ ಅಧಿಕಾರ ಬಿಟ್ಟು ಹೋಗಲಿ. ರಾಜ್ಯಪಾಲರ ಆಡಳಿತ ಬಂದ ಮೇಲೆ ಅಧಿಕಾರಿಗಳು ಪರಿಸ್ಥಿತಿ ನಿಯಂತ್ರಣ ಮಾಡುತ್ತಾರೆ ಎಂದರು.

Join Whatsapp
Exit mobile version