Home ಟಾಪ್ ಸುದ್ದಿಗಳು ಪರಿಷ್ಕೃತ ಪಠ್ಯ ಪುಸ್ತಕ ಪ್ರತಿಯನ್ನು ಹರಿದು ಬಿಸಾಕಿದ ಡಿಕೆ ಶಿವಕುಮಾರ್

ಪರಿಷ್ಕೃತ ಪಠ್ಯ ಪುಸ್ತಕ ಪ್ರತಿಯನ್ನು ಹರಿದು ಬಿಸಾಕಿದ ಡಿಕೆ ಶಿವಕುಮಾರ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಠ್ಯ ಪುಸ್ತಕ ಪ್ರತಿಯನ್ನು ಹರಿದು ಬಿಸಾಕಿದ್ದಾರೆ. ಪಠ್ಯಪರಿಷ್ಕರಣಾ ಸಮಿತಿಯ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರನ್ನು ಬಂಧಿಸುವಂತೆ ಹಾಗೂ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ರಾಜೀನಾಮೆಗೆ ಆಗ್ರಹಿಸಿ ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಹಮ್ಮಿಕೊಂಡಿರುವ ಪ್ರತಿಭಟನಾ ವೇದಿಕೆ ಈ ಘಟನೆಗೆ ಸಾಕ್ಷಿಯಾಯಿತು.

ಬಳಿಕ ಮಾತನಾಡಿದ ಅವರು, ನಾನು ಇದನ್ನು ಸುಟ್ಟು ಹಾಕಬೇಕು ಎಂದು ಬಂದೆ. ಆದರೆ ವೇದಿಕೆ ಮೇಲೆ ಸುಡಲು ಆಗಲ್ಲ. ಹಾಗಾಗಿ ಹರಿದು ಹಾಕಿದ್ದೇನೆ ಎಂದರು.

ಈ ಹೋರಾಟದೊಂದಿಗೆ ನಾವು ಇದ್ದೇವೆ ಎಂದು ಹೇಳಲು ಬಂದಿದ್ದೇನೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷದ ಪ್ರತಿನಿಧಿಯಾಗಿ ಬಂದಿದ್ದೇನೆ. ನಾವು ವಿಧಾನಸಭೆಯಲ್ಲಿ ಮಾತಾಡಬೇಕು. ಆದರೆ ಸಮಯ ಬಂದಿಲ್ಲ. ಪಠ್ಯಪುಸ್ತಕ ಪರಿಷ್ಕರಣೆ ವಾಪಸು ಪಡೆಯುವವರೆಗೂ ಹೋರಾಟ ಮಾಡ್ತೇವೆ. ಈ ಹೋರಾಟದ ಬುನಾದಿ ಹಾಕಿದವರಿಗೆ ಸಾಷ್ಟಾಂಗ ನಮಸ್ಕಾರ ಎಂದರು.

ಬರಗೂರು ರಾಮಚಂದ್ರಪ್ಪ ಅವರ ಪಠ್ಯ ರಾಜ್ಯದ ಸೊತ್ತು. ಅವರ ಪಠ್ಯಪುಸ್ತಕ ಎಂದಿಗೂ ಯಾರು ಸಹ ವಿರೋಧ ಮಾಡಲಿಲ್ಲ. ಮುಂದೆ ಬೇರೆ ಪಕ್ಷ ಅಧಿಕಾರಕ್ಕೆ ಬರುತ್ತೆ. ಆಗ ನೀವು ಮಾಡಿದ ಪರಿಷ್ಕರಣೆಯನ್ನು ಕೆಳಗೆ ಇಳಿಸುತ್ತೇವೆ ಎಂದರು.

ನಾಡಿನ ಸಂಸ್ಕೃತಿ ಉಳಿಸಲು ಹೋರಾಟ ಮಾಡುತ್ತಿದ್ದೀರಿ. ಮೂರು ಸಾವಿರಕ್ಕೂ ಹೆಚ್ಚು ಮಠಾಧೀಶರು ಇದ್ದಾರೆ. ನಮ್ಮ ರಾಜಕಾರಣಕ್ಕೆ ನಿಮ್ಮ ಬೆಂಬಲ ಬೇಡ. ಆದರೆ, ಎಲ್ಲಾ ಜಾತಿ, ಧರ್ಮಗಳಿಗೆ ಅಪಮಾನ ಆಗಿದೆ. ಹಳ್ಳಿ ಹಳ್ಳಿಯಲ್ಲೂ ಹೋರಾಟ ಮಾಡೋಣ ಎಂದು ಡಿಕೆ ಶಿವಕುಮಾರ್ ಹೇಳಿದರು.

Join Whatsapp
Exit mobile version