Home ಟಾಪ್ ಸುದ್ದಿಗಳು ಬೇರೆಯವರ ಜಗಳ ನಮಗೆ ಬೇಡ, ಮೇಕೆದಾಟು ಯೋಜನೆ ಸರ್ಕಾರದ ಆದ್ಯತೆ ಆಗಲಿ: ಡಿ.ಕೆ.ಶಿವಕುಮಾರ್

ಬೇರೆಯವರ ಜಗಳ ನಮಗೆ ಬೇಡ, ಮೇಕೆದಾಟು ಯೋಜನೆ ಸರ್ಕಾರದ ಆದ್ಯತೆ ಆಗಲಿ: ಡಿ.ಕೆ.ಶಿವಕುಮಾರ್

ಬೆಂಗಳೂರು: ನಾನು ಬೇರೆಯವರ ಜಗಳದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಆ ಬಗ್ಗೆ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರಕ್ಕೆ ಮೇಕೆದಾಟು ಯೋಜನೆ ಆದ್ಯತೆ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಮಾಧ್ಯಮಗಳು ಸಂಸದೆ ಸುಮಲತಾ ಅಂಬರೀಷ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ನಡುವಣ ವಾಕ್ಸಮರದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, “ಯಾರ ಜಗಳದಲ್ಲೂ ಮಧ್ಯಪ್ರವೇಶಿಸುವ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ನಾನು ಸರ್ಕಾರಕ್ಕೆ ಆಗ್ರಹಿಸುವುದೇನೆಂದರೆ, ಮುಖ್ಯಮಂತ್ರಿ ಯಡಿಯೂರಪ್ಪನವರು ಆದ್ಯತೆ ಮೇರೆಗೆ ಮೇಕೆದಾಟು ಯೋಜನೆ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

 ಕೆಆರೆಸ್ ಬಿರುಕು ವಿಚಾರ ನೋಡಿಕೊಳ್ಳಲು ಸರ್ಕಾರ, ಈ ಸಚಿವಾಲಯ ಇಟ್ಟುಕೊಂಡಿರುವ ಮುಖ್ಯಮಂತ್ರಿಗಳು, ತಂತ್ರಜ್ಞರ ತಂಡ ಇದೆ. ಅವರು ಪರಿಶೀಲನೆ ನಡೆಸಿ ವಾಸ್ತವ ಸ್ಥಿತಿ ಹೇಳಬೇಕು. ಬಿರುಕು ಬಿಟ್ಟಿದೆ ಎಂದು ಹೇಳಿ ಜನರಲ್ಲಿ ಆತಂಕ ಮೂಡಿಸುವುದು ನಮ್ಮ ಕೆಲಸವಲ್ಲ. ವಿರೋಧ ಪಕ್ಷವಾಗಿ ನಮ್ಮ ಕೆಲಸ, ಸರ್ಕಾರಕ್ಕೆ ಸಲಹೆ ನೀಡುವುದು ಅಥವಾ ಅವರು ಕೆಲಸ ಮಾಡದಿದ್ದಾಗ ಟೀಕೆ ಮಾಡುವುದು, ಕೆಲಸ ಮಾಡಿಸುವುದು. ರೈತರು, ಜನರಲ್ಲಿ ಭಯ ಹುಟ್ಟಿಸುವ ವಿಚಾರದಲ್ಲಿ ಕಾಂಗ್ರೆಸ್ ಎಂದಿಗೂ ಭಾಗಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ನಮ್ಮ ಆದ್ಯತೆಯಲ್ಲದ ವಿಚಾರವಾಗಿ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ನಮ್ಮ ಬಗ್ಗೆ ಏನೇ ಹೇಳಿದರೂ ನಾವು ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಜಗಳ ಮಾಡಿಕೊಂಡರೆ ಅದರ ಬಗ್ಗೆ ನಾನ್ಯಾಕೆ ಮಾತನಾಡಲಿ? ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಒಂದು ಮಾಧ್ಯಮದಲ್ಲಿ ವರದಿ ನೋಡಿದೆ. ಈ ವಿಚಾರ ಏನು ಎಂದು ತಿಳಿದುಕೊಂಡು ನಂತರ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ.

Join Whatsapp
Exit mobile version