ಕಾಂಚೀಪುರಂ: ಪ್ರವಾಹ ಪರಿಸ್ಥಿತಿಗೆ ಹಿಂದಿನ ಕಾಂಗ್ರೆಸ್ ಸರ್ಕಾರವನ್ನು ದೂಷಿಸಿದ್ದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನೀವು ರಾಜೀನಾಮೆ ಕೊಟ್ಟು ರಾಷ್ಟ್ರಪತಿ ಆಳ್ವಿಕೆಗೆ ಅವಕಾಶ ನೀಡಿ. ಅವರಾದರೂ ಈ ಸಮಸ್ಯೆ ಪರಿಹರಿಸಬಹುದು. ಮುಂದೆ ನಾವು ಅಧಿಕಾರಕ್ಕೆ ಬಂದು ನಗರದಲ್ಲಿನ ನೀರಿನ ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದು ಹೇಳಿದ್ದಾರೆ.
ಭಾರೀ ಮಳೆಯಿಂದಾಗಿ ಬೆಂಗಳೂರು ಹಿಂದೆಂದೂ ಕಂಡರಿಯದ ಪ್ರವಾಹಕ್ಕೆ ಸಿಲುಕಿದೆ. ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ರಾಜಕೀಯ ಜಿದ್ದಾಜಿದ್ದಿನ ಪೈಪೋಟಿ ಆರಂಭವಾಗಿದ್ದು, ಭಾರತದ ಸಿಲಿಕಾನ್ ವ್ಯಾಲಿಯ ಹದಗೆಡುತ್ತಿರುವ ಸ್ಥಿತಿಗೆ ಪರಸ್ಪರ ದೂಷಿಸುತ್ತಿವೆ.
ತಮಿಳುನಾಡಿನ ಶ್ರೀಪೆರಂಬುದೂರಿನ ರಾಜೀವ್ ಗಾಂಧಿ ಸ್ಮಾರಕದಲ್ಲಿ ಪ್ರಾರ್ಥನಾ ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಶಿವಕುಮಾರ್, “ನಮ್ಮ ಧ್ಯೇಯವಾಕ್ಯವು ವಿಭಿನ್ನವಾಗಿದೆ. ಕಾಂಗ್ರೆಸ್ ಏನು ಮಾಡಿದೆ ಎಂದು ನಾನು ಬಿಜೆಪಿ ನಾಯಕರಿಗೆ ಉತ್ತರಿಸಲು ಬಯಸುವುದಿಲ್ಲ. ಸಿಎಂ ಬಸವರಾಜ್ ಬೊಮ್ಮಾಯಿ ಅವರೇ ನಿಮ್ಮ ಅಧಿಕಾರವನ್ನು ಬಿಟ್ಟುಬಿಡಿ ಮತ್ತು ರಾಷ್ಟ್ರಪತಿ ಆಳ್ವಿಕೆ ಇರಲಿ. ನಾವು ಅಧಿಕಾರಕ್ಕೆ ಬರುತ್ತೇವೆ ಮತ್ತು ಈ ಸಮಸ್ಯೆಯನ್ನು ಪರಿಹರಿಸುತ್ತೇವೆ. ” ಎಂದು ಹೇಳಿದರು.
ಬೆಂಗಳೂರಿನಲ್ಲಿನ ಪ್ರವಾಹ ಪರಿಸ್ಥಿತಿಗೆ ಹಿಂದಿನ ಕಾಂಗ್ರೆಸ್ ಸರ್ಕಾರದ ದುರಾಡಳಿತ ಕಾರಣ ಎಂದು ಮುಖ್ಯಮಂತ್ರಿಗಳು ಆರೋಪಿಸಿದ್ದರು.