ಡಿ.ಕೆ.ಶಿವಕುಮಾರ್ ‘ಕೈ’ ಎತ್ತುವುದಷ್ಟೇ ಅಲ್ಲ, ‘ಕೈ’ ಕೊಡುವುದರಲ್ಲೂ ಎತ್ತಿದ ‘ಕೈ’ : ಜೆಡಿಎಸ್ ಟ್ವೀಟಾಸ್ತ್ರ

Prasthutha|

ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಧ್ಯೆ ರಾಜಕೀಯ ಕೆಸರೆಚಾಟ ಶುರುವಾಗಿದೆ. ಸಮಿಶ್ರ ಸರ್ಕಾರ ಬೀಳಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾರಣ ಎಂದು ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿಯವರು ಆರೋಪ ಮಾಡಿದ್ದಾರೆ. ಇದರಿಂದ ಇಬ್ಬರ ಮಧ್ಯೆ ವಾಗ್ಯುದ್ಧ ಶರುವಾಗಿದೆ. ಅಲ್ಲದೆ ಕಾಂಗ್ರೆಸ್ ಮಂಗಳವಾರ ಸರಣಿ ಟ್ವೀಟ್ ಮಾಡುವ ಮೂಲಕ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದ್ದತ್ತು. ಈ ಹಿನ್ನೆಲೆಯಲ್ಲಿ ಜೆಡಿಎಸ್ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ಮಾಡಿದೆ.

- Advertisement -


“‘ಕೈ’ ಅಭಯದ ಸಂಕೇತವೆಂದು ನಂಬಿದ್ದರು ಕುಮಾರಸ್ವಾಮಿ. ಆದರೆ, ಡಿ.ಕೆ.ಶಿವಕುಮಾರ್ ಅವರದ್ದು ‘ಕೈ’ ಎತ್ತುವುದಷ್ಟೇ ಅಲ್ಲ, ‘ಕೈ’ ಕೊಡುವುದರಲ್ಲೂ ಎತ್ತಿದ ‘ಕೈ’ ಎಂದು ಅವರಿಗೆ ಗೊತ್ತಾಗಲೇ ಇಲ್ಲ. ಅಸೆಂಬ್ಲಿಯಲ್ಲಿ ‘ಕೈ’ ಎತ್ತಿದರು, ಮಂಡ್ಯದಲ್ಲೂ ‘ಕೈ’ ಎತ್ತಿದರು. ಬೆಂಗಳೂರು ಗ್ರಾಮಾಂತರದಲ್ಲೂ ‘ಕೈ’ ಎತ್ತಿದರು!! ಪಾಪ.. ಕುಮಾರಸ್ವಾಮಿ ಅವರು ನಂಬಿದರು. ಬೆಂಗಳೂರು ಗ್ರಾಮಾಂತರದಲ್ಲಿ ಕುಮಾರಸ್ವಾಮಿಯವರು, ಅವರ ‘ಕೈ’ ಹಿಡಿದರು. ಮಂಡ್ಯದಲ್ಲಿ ಅದೇ ‘ಕೈ’ ಅವರನ್ನು ನಡುರಸ್ತೆಯಲ್ಲಿ ಬಿಟ್ಟು ಜಾರಿಕೊಂಡಿತು” ಎಂದು ಹರಿಹಾಯ್ದಿದೆ.
“135 ಸೀಟು ಗೆದ್ದಿದ್ದೇವೆ ಎನ್ನುವ ಧಿಮಾಕಿನಲ್ಲಿ ಏನು ಹೇಳಿದರೂ ಜನ ನಂಬುತ್ತಾರೆಂಬ ಅಹಂಕಾರವೇ? ಆಗ ಹೆಚ್ಡಿ ದೇವೇಗೌಡ ಅವರ ಮನೆ ಅಂಗಳದಲ್ಲಿ ಅಂಗಿ ಮಡಚಿ ಮುಖ ಒಣಗಿಸಿಕೊಂಡು ನಿಂತ ಧೀರರು ಯಾರೆಂದು ಗೊತ್ತಿಲ್ಲವೇ? ಎಲ್ಲೋ ಇದ್ದ ಕುಮಾರಸ್ವಾಮಿ ಅವರನ್ನು ಪಾಪರಾಜ್ಜಿಗಳಂತೆ ಬೆನ್ಹತ್ತಿ, ಆಮೇಲೆ ಕಾಡಿ ಬೇಡಿ ದೇವೇಗೌಡರ ಪದತಲಕ್ಕೆ ಬಿದ್ದವರ ಪುರಾಣ ಬಿಚ್ಚಿಡಬೇಕೆ?” ಎಂದು ವಾಗ್ದಾಳಿ ಮಾಡಿದೆ.
“ಇದೆಂತಾ ಕೈಚಳಕ? ಅವರ ಹಸ್ತವಾಸಿ ವಿಸ್ವಾಸಘಾತುಕಕ್ಕೇ ಹೆಸರುವಾಸಿ.. ಅಲ್ಲವೇ? ಕುಮಾರಸ್ವಾಮಿ ಅವರ ಕಣ್ಣುಗಳಲ್ಲಿ ಕಣ್ಣೀರು ಬರುತ್ತದೆ, ನಿಜ. ಇಲ್ಲ ಎಂದವರು ಯಾರು? ಇನ್ನೊಬ್ಬರ ಕಣ್ಣಲ್ಲಿ ರಕ್ತ ಸುರಿಸುವ ಕೆಲಸವನ್ನು ಅವರೆಂದೂ ಮಾಡಿಲ್ಲ, ಅವರ ನಾಲಿಗೆ ಸತ್ಯದ ಕಡೆಗೆ ಹೊರಳಿದೆಯೇ ಹೊರತು, ಅಸತ್ಯದೆಡೆಗಲ್ಲ. ಅಣ್ಣಾ.. ಅಣ್ಣಾ ಎಂದ ಆಚಾರವಿಲ್ಲದ ಆ ನಾಲಿಗೆ, ಇಂಥಾ ನೀಚ ಬುದ್ಧಿ ಬಿಡುವುದು ಯಾವಾಗ? ಪಿಹೆಚ್ ಡಿ ಮಾಡೋದಕ್ಕೆ ಅವರಿಂತ ಉತ್ತಮ ಗೈಡ್ ಬೇರೆ ಸಿಕ್ಕಾರೆಯೇ ನಿಮಗೆ? ” ಎಂದು ಪ್ರಶ್ನಿಸಿದೆ.
“ಮಾತೆತ್ತಿದರೆ ಜಾತಿಗಳನ್ನು ಎಳೆದು ತರುತ್ತೀರಿ. ಕನಕಪುರ ಸುತ್ತಮುತ್ತ ಅದೇ ಮಹಾನುಭಾವರಿಂದ ಒಕ್ಕಲೆದ್ದವರು ಎಷ್ಟೋ ಜನ. ಅವರೆಲ್ಲ ಯಾವ ಜಾತಿಯವರು? ಅಧಿಕಾರಕ್ಕೊಂದು ಜಾತಿ, ಕೊಳ್ಳೆ ಹೊಡೆಯುವುದಕ್ಕೊಂದು ಜಾತಿಯೇ!! ಅಲ್ಲಿ ಹರಿದಿದ್ದು ರಕ್ತ ಕಣ್ಣೀರು, ಅವರ ಉಸಿರು ತಟ್ಟಿದ್ದಕ್ಕೇ ತಿಹಾರು! ಕರ್ಮಕ್ಕೆ ತಕ್ಕಂತೆಯೇ ಫಲ!! ಶ್ಲೋಕಗಳನ್ನು ಶೋಕಿಗೆ ಬಳಸಿಕೊಳ್ಳುವ ವ್ಯಕ್ತಿಗೆ ಇಷ್ಟು ಸಾಮಾನ್ಯ ಜ್ಞಾನವೂ ಇಲ್ಲವೇ?” ಎಂದು ಆಕ್ರೋಶ ವ್ಯಕ್ತಪಡಿಸಿದೆ.

“ಜಾತ್ಯತೀತ ಎಂದ ಪೆನ್ನು ಜಾತಿ ಜಾತಿ ಎಂದು ಗೀಚುತ್ತಿದೆ! ಮಿದುಳಿಗೂ ಪೆನ್ನಿಗೂ ಲಿಂಕ್ ತಪ್ಪಿದೆಯಾ ಹೇಗೆ? ಅಥವಾ ಬೇರೆಯವರು ಬೆಪ್ಪರು ಎನ್ನುವ ಮದವೇ? ಅಧಿಕಾರಕ್ಕಾಗಿ ಶಿವಸೇನೆಯ ಜತೆ ಮಹಾ ಶೋ ನಡೆಸಿದಾಗ ಆ ಜಾತ್ಯತೀತತೆಯನ್ನು ಯಾವ ಶೋಕೇಸಿನಲ್ಲಿ ಇಟ್ಟಿದ್ದಿರಿ? ಬಿಜೆಪಿ ಜತೆ ಸುದೀರ್ಘ ಕಾಲ ಅಧಿಕಾರದ ಸುಖ ಅನುಭವಿಸಿದ ನಿತೀಶ್ ಕುಮಾರ್ ಪಕ್ಕದಲ್ಲಿ ಆಸೀನರಾದಾಗ ಜಾತ್ಯತೀತವನ್ನು ಎಲ್ಲಿ ಜೀತಕ್ಕೆ ಇಟ್ಟಿದ್ದಿರಿ? I.N.D.I.A ಕೂಟದಲ್ಲಿರುವ ಬಿಜೆಪಿಯ ಎಲ್ಲಾ ನೇರ ಫಲಾನುಭವಿಗಳ ಪದತಲದಲ್ಲಿ ಹಣೆ ಇಟ್ಟಾಗ ಹಸ್ತದ ಜಾತ್ಯತೀತತೆಯನ್ನು ಮಡಚಿ ಯಾರ ಜೇಬಿನಲ್ಲಿ ಇಟ್ಟಿದ್ದಿರಿ?” ಎಂದು ಹೇಳಿದೆ.
“ಕೊಳಕುಮಂಡಲಕ್ಕೆ ಎರಡು ತಲೆ ಇರುವಂತೆ ಕಾಂಗ್ರೆಸ್ಸಿಗೂ ಎರಡು ತಲೆ! ಒಂದರ ನಾಲಿಗೆಯ ಮೇಲೆ ಜಾತ್ಯತೀತ, ಇನ್ನೊಂದರ ನಾಲಿಗೆ ಮೇಲೆ ಜಾತಿಗಣಿತ!! ಜನರು ಛೀ! ಥೂ!! ಎನ್ನುತ್ತಿದ್ದಾರೆ. ಸ್ವತಃ ಕಾಂಗ್ರೆಸ್ಸೇ ಪ್ರಾದೇಶಿಕ ಪಕ್ಷಗಳ ಜೀತಕ್ಕೆ ಬಿದ್ದಿರುವಾಗ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಲು ನಾಚಿಕೆ ಆಗುವುದಿಲ್ಲವೇ?” ಎಂದು ವಾಗ್ದಾಳಿ ಮಾಡಿದೆ.
“ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಕುಮಾರಸ್ವಾಮಿ ಅವರ ಷಡ್ಯಂತ್ರವಾ !!?? ಅಹಾ.. ಎಂಥಾ ಮಾತು? ಕಾಂಗ್ರೆಸ್ಸಿಗೆ ಸದಾ ಕಾಲಮಾನವೂ ಕಾಮಾಲೆ ರೋಗ ಬಡಿದಿರುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ. ಕುಯುಕ್ತಿ, ಕುತಂತ್ರ, ಷಡ್ಯಂತ್ರ, ತಂತ್ರ, ಮಂತ್ರ, ಕ್ಷುದ್ರವಿದ್ಯೆಗಳಿಗೆಲ್ಲ ಕೇರಾಫ್ ಅಡ್ರಸ್ಸೇ ಡಿಕೆಶಿ!! ಅವರ ಪಾಂಡಿತ್ಯಕ್ಕೆ ಸರಿಸಾಟಿ ಯಾರಿಹರು?”
ಕಂಡೋರ ತಟ್ಟೆ ನೋಡಿ ವಿಕೃತಿ ಮೆರೆಯುವುದು ಕಾಂಗ್ರೆಸ್ ಸಂಸ್ಕೃತಿ! ಅದು ಮನೋರೋಗವು ಹೌದು. ನಿಮ್ಹಾನ್ಸ್ ನಲ್ಲೂ ಇದಕ್ಕೆ ನಿಖರ ಮದ್ದಿರಲಿಕ್ಕಿಲ್ಲ. ತನ್ನ ತಟ್ಟೆಯಲ್ಲಿ ಸತ್ತ ಹೆಗ್ಗಣವಿದ್ದರೂ, ಪಕ್ಕದ ಎಲೆಯ ಬಗ್ಗೆ ಎಲ್ಲಿಲ್ಲದ ಕಾಳಜಿ, ಚಿಂತೆ, ತೋರಿಕೆ. ಇದು ಆ ಪಕ್ಷದ ಪಾರಂಪರಿಕ ವಾಡಿಕೆ!! 75 ವರ್ಷಗಳಿಂದ ಅದನ್ನೇ ಮಾಡಿದೆ. ತನ್ನ ಅಡಿಗೆ ಬೆಂಕಿ ಬಿದ್ದಾಗಲೆಲ್ಲ ಜಾತ್ಯತೀತತೆ ಜಪ ಮಾಡುತ್ತದೆ. ಕೋಮುವಾದ, ಜಾತ್ಯತೀತವಾದ ಎನ್ನುತ್ತಾ ‘ಜಾತಿಗಣಿತ’ದ ಮೂಲಕ ಜನರನ್ನು ಕೂಡಿ ಕಳೆದು ಇಬ್ಬಾಗಿಸುತ್ತದೆ.
“ಪ್ರಾದೇಶಿಕ ಪಕ್ಷಗಳ ಪಟ್ಟುಗಳಿಗೆ ಸೂತ್ರವಿಲ್ಲದ ಪತಂಗದಂತೆ ಪತರಗುಟ್ಟುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಅಮಿತ್ ಶಾ ಅವರ ಹೆಸರು ದುಃಸ್ವಪ್ನದಂತೆ ಕಾಡುತ್ತಿದೆ. ರಾಜಕೀಯ ಸ್ವಾರ್ಥಕ್ಕಾಗಿ ಭಯೋತ್ಪಾದಕರನ್ನೂ ಸಮರ್ಥಿಸುತ್ತಾ; ಈಗ ಭಯ, ಒತ್ತಡ, ಷರತ್ತು ಎಂದು ಪಠಿಸುತ್ತಿದೆ.”
“ಕಾಲಾಯ ತಸ್ಮೈ ನಮಃ, ಇದನ್ನು ಕಾಂಗ್ರೆಸ್ ಮರೆಯದಿದ್ದರೆ ಕ್ಷೇಮ. ಪರಿವಾರ ಪಾಲಿಟಿಕ್ಸ್ʼನಲ್ಲಿ ಕಾಂಗ್ರೆಸ್ಸಿಗೆ ಸಾಟಿ ಮೇಟಿ ಉಂಟೆ? ಜನಪಥ ಹತ್ತರಲ್ಲಿರುವ ಮನೆಗಿಂತಾ ಬೇಕೆ? ಎಷ್ಟು ನಾಯಕರು ಅಲ್ಲಿನ ರಾಜಕೀಯಕ್ಕೆ ಉಸಿರುಗಟ್ಟಿ ನರಳಿದರೆಂಬ ಲೆಕ್ಕಾ ಇದೆಯೇ?”
“ದೇವೇಗೌಡರು, ಕುಮಾರಸ್ವಾಮಿ ಅವರಿಗೆ ದ್ರೋಹವೆಸಗಿದವರ ಪಟ್ಟಿಯನ್ನು ನೀವೆ ಮಾಡಿದ್ದೀರಿ, ಸಂತೋಷ. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಪಮಾನಕರವಾಗಿ ದೆಹಲಿಗೆ ಅಟ್ಟಿದವರು ಯಾರು? ಸಿದ್ದವನದಲ್ಲಿ ಸಿದ್ದಸೂತ್ರ ಹೆಣೆದು ಮೈತ್ರಿ ಸರಕಾರ ತೆಗೆದವರು ಯಾರು? ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೇ ಕಾಡಿ-ಬೇಡಿ ತಂದ ಸರಕಾರಕ್ಕೆ ಅಂತ್ಯ ಕಾಣಿಸಿದ ಆ ಹ್ಯೂಬ್ಲೆಟ್ ವೀರನ ಬಗ್ಗೆ ಗೊತ್ತಿಲ್ಲವೇ? ಲೋಕಸಭೆ ಚುನಾವಣೆ ಹೊತ್ತಿಗೆ ಮೈತ್ರಿಗೆ ಪಿಂಡ ಪ್ರದಾನ ಮಾಡಿ ಸ್ವಪಕ್ಷವನ್ನೇ ಬೀದಿಯಲ್ಲಿ ನಿಲ್ಲಿಸಿದ ಆ ಲೋಕೋತ್ತರ ಜಾತ್ಯತೀತವಾದಿಯ ಅಸಲಿಮುಖ ಗೋಚರವಾಗಿಲ್ಲವೇ?”
“ನಿಮ್ಮ ಪಟ್ಟಿಯಲ್ಲಿರುವ ರಾಜಕೀಯದ ಪರಮ ಪುರುಷೋತ್ತಮರೆಲ್ಲರೂ ನಮ್ಮ ಪಕ್ಷಕ್ಕೆ ಬಂದರು. ಪೊಗದಸ್ತಾಗಿ ಉಂಡರು, ಆಮೇಲೆ ಎದ್ದು ಹೋದರು. ʼಉಂಡು ಹೋದ, ಕೊಂಡು ಹೋದʼ ಎನ್ನುತ್ತೀವಲ್ಲಾ.. ಹಾಗೆ. ಆದರೆ, ಅದೇ ಸಿದ್ದಪುರುಷನನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಂಡವರು, ‘ಅನ್ ಪಾಲಿಷ್ಡ್ ಡೈಮಂಡ್’ ಎಂದು ಸೋನಿಯಾ ಗಾಂಧಿ ಅವರ ಮುಂದೆ ವಕಾಲತ್ತು ಹಾಕಿದ ಎಸ್.ಎಂ.ಕೃಷ್ಣ ಅವರ ಬಗ್ಗೆ ಈ ಪರಿಯ ಕೃತಜ್ಞತೆಗೆ ಏನಾಗಿತ್ತು? ಕೃತಜ್ಞತೆ, ಕರುಣೆ, ಉಪಕಾರ ಸ್ಮರಣೆಗಳ ಕತ್ತು ಕುಯ್ದು ರಾಜಕೀಯದ ಅಂತ್ಯಕಾಲದಲ್ಲಿ ಅವರು ಬಿಜೆಪಿಗೆ ಹೋಗುವ ಸ್ಥಿತಿ ಸೃಷ್ಟಿಸಿದವರು ಯಾರು? ವಿಶ್ವಸಂಸ್ಥೆಯಿಂದ ದೆಹಲಿಗೆ ಮರಳಿದ ಕೂಡಲೇ ಅಪಮಾನಕರವಾಗಿ ಸಂಪುಟದಿಂದ ಅವರನ್ನು ಕಿತ್ತೊಗೆದದ್ದು ಉಪಕಾರ ಸ್ಮರಣೆಯೇ? ಕಷ್ಟಕಾಲದಲ್ಲಿ ಇಡೀ ಕಾಂಗ್ರೆಸ್ಸಿಗೆ ಆಸರೆ ಆಗಿದ್ದವರನ್ನು ತುಚ್ಛವಾಗಿ ಆಚೆಗಟ್ಟಿದ್ದು ಗೌರವವೇ? ಅವಕಾಶವಾದಿ, ಗೋಸುಂಬೆ, ನರಿಬುದ್ಧಿ ಯಾರದ್ದು?”
“ಕಾಲಕ್ಕೆ ತಕ್ಕಂತೆ ಕಲರ್ ಬದಲಿಸಿಕೊಳ್ಳುವ ಕಾಂಗ್ರೆಸ್ ಪಕ್ಷಕ್ಕೆ ಅರೆಮರೆವು ರೋಗ. ‘ಅನ್ ಪಾಲಿಷ್ಡ್ ಡೈಮಂಡ್’ ಕೈ ಪಾಲಾದ ಮೇಲೆ, ಅಲ್ಲಿದ್ದ ಮೂಲನಿವಾಸಿಗಳ ಗತಿ ಏನಾಯಿತು? ಬಹುತೇಕರು ಬೀದಿಪಾಲು. ಖರ್ಗೆಯವರೇ ದೆಹಲಿ ಪಾಲು, ಉಳಿದವರನೇಕರು ಬಿಜೆಪಿ ಪಾಲು! ಹೋಗಲಿ, ಸಿ.ಎಂ.ಇಬ್ರಾಹಿಂ ಅವರು ನಮ್ಮ ಪಕ್ಷದ ಪಾಲಾಗಿದ್ದು ಯಾಕೆ? ನಿಮ್ಮ ಪಡಸಾಲೆಯಲ್ಲಿ ಗತಿಗೆಟ್ಟು ಕೂತಿದ್ದ ‘ವಲಸೆ ಹಕ್ಕಿ’ ನಮ್ಮಲ್ಲಿಗೆ ಬಂದು ಶಾಸಕರಾದರು, ರಾಜ್ಯಾಧ್ಯಕ್ಷರೂ ಆದರು. ಆಮೇಲೆ ಬೇಲಿ ಹಾರಿ ಆಶ್ರಯ ಕೊಟ್ಟವರನ್ನೇ ಈಗ ಹದ್ದಾಗಿ ಕುಕ್ಕುತ್ತಿದ್ದಾರೆ!”
“ಹೀಗೆ, ವಲಸೆ ಹಕ್ಕಿಗಳ ಹಿಂಡನ್ನೇ ಕಟ್ಟಿಕೊಂಡು ರಣಹದ್ದುಗಳಂತೆ ಕಾಂಗ್ರೆಸ್ ಮೂಲನಿವಾಸಿಗಳನ್ನು ಕುಕ್ಕಿಕುಕ್ಕಿ ಹರಿದು ತಿನ್ನುತ್ತಿರುವ ʼಸಿದ್ದಕಲೆʼಯೇ ಕರ್ನಾಟಕ ರಾಜಕೀಯದ ಹೊಸ ಮಾದರಿ! ಅದು ಮಾದರಿ ಅಲ್ಲ, ಮಹಾಮಾರಿ. ಕಷ್ಟದಿಂದ ಗೆದ್ದಲು ಕಟ್ಟಿಕೊಂಡ ಹುತ್ತದೊಳಕ್ಕೆ ವಿಷಸರ್ಪ ಹೊಕ್ಕಿದಂತೆ ಆಗಿದೆ ರಾಜ್ಯ ಕಾಂಗ್ರೆಸ್ ಗತಿ. ತನ್ನ ಮನೆಬಾಗಿಲು ಕಾಯುವ ಗಿರಾಕಿಗಳನ್ನೇ ಸಂಪುಟಕ್ಕೆ ತುಂಬಿಕೊಂಡು ಪಕ್ಷಕ್ಕೆ ರಕ್ತಮಾಂಸ ತುಂಬಿದವರೆಲ್ಲ ಸಿದ್ದಸಿಂಹಾಸನಕ್ಕೆ ದೂರ ದೂರ!!”
“ನಂಬಿಕೆ, ಪ್ರಾಮಾಣಿಕತೆ, ನಿಷ್ಠೆ, ನಿಯತ್ತನ್ನು ಗುಜರಿಗೆ ಹಾಕಿ ʼಸಂಡೇ ಬಜಾರ್ʼನಂತೆ ವಿಧಾನಸೌಧವನ್ನೇ ʼಗುರುವಾರದ ಬಜಾರ್ʼ ಮಾಡಿಕೊಂಡವರು ನೀವು. ನಿಜಕ್ಕೂ ನಿಮಗೆ ಲಜ್ಜೆ ಇದೆಯಾ? ವಾರಕ್ಕೊಂದು ದಿನ, ಅದೂ ಗುರುವಾರದ ದಿನವಷ್ಟೇ ಸಂಪುಟ ನೆಪದಲ್ಲಿ 3ನೇ ಮಹಡಿಯಲ್ಲಿ ಕೆಲ ಹೊತ್ತಷ್ಟೇ ಠಳಾಯಿಸಿ, 24/7 ರಾಜ್ಯವನ್ನು ಗುಡಿಸಿ ಗುಂಡಾಂತರ ಮಾಡುತ್ತಿರುವವರು ಲಜ್ಜೆಯಲ್ಲೂ ಕನಿಷ್ಠ-ಗರಿಷ್ಠ ಎಂದು ಅಳತೆ ಮಾಡುತ್ತಿರುವುದು ಅದ್ಭುತ.. ಅಲ್ಲಲ್ಲ.. ಅದ್ಭುತಃ!”