ಜನರ ಆಕ್ರೋಶ ಕಂಡು ಬಿಜೆಪಿಯವರಿಗೆ ಭಯ ಬಂದಿದೆ : ಡಿ.ಕೆ. ಶಿವಕುಮಾರ್

Prasthutha|

ಚಾಮರಾಜನಗರ: ರಾಜ್ಯ ಸರ್ಕಾರದ ದುರಾಡಳಿತ ಕಂಡು ಜನ ಆಕ್ರೋಶಗೊಂಡಿದ್ದಾರೆ. ಅವರ ಆಕ್ರೋಶಕ್ಕೆ ಹೆದರಿ ಬಿಜೆಪಿ ನಾಯಕರು ಜನರ ಬಳಿಗೆ ಹೋಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ನಾಯಕರ ಕಾಲೆಳೆದಿದ್ದಾರೆ.  

- Advertisement -

ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ ಸತ್ತವರ ಮನೆಗಳಿಗೆ ಭಾನುವಾರ ಭೇಟಿ ನೀಡಿದ ವೇಳೆ  ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಕೇವಲ ಮೂರು ಜನ ಮೃತಪಟ್ಟರು ಎಂದು ಸರ್ಕಾರ ಆರಂಭದಲ್ಲಿ ಹೇಳಿತ್ತು. ನಂತರ ನಾವು ಇಲ್ಲಿಗೆ ಭೇಟಿ ನೀಡಿದಾಗ 28 ಮಂದಿ ಸತ್ತಿದ್ದಾರೆ ಎಂಬುದು ಗೊತ್ತಾಯಿತು. ಇದನ್ನೆಲ್ಲ ಗಮನಿಸಿದ ಹೈಕೋರ್ಟ್ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಸರ್ಕಾರವನ್ನು ಕೇಳದೇ, ನಿವೃತ್ತ ನ್ಯಾಯಾಧೀಶರ ತಂಡ ಕಳುಹಿಸಿ ತನಿಖೆ ನಡೆಸಿದಾಗ ಒಟ್ಟು 36 ಮಂದಿ ಸತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿತು. ಇವು ಸಾವಲ್ಲ, ಕೊಲೆ. ಸರ್ಕಾರ ಮಾಡಿರುವ ಕೊಲೆ. ಈ ಕೊಲೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೇಂದ್ರ ಸರ್ಕಾರ ವಿಪತ್ತು ನಿರ್ವಹಣಾ ನಿಧಿಯಿಂದ 4 ಲಕ್ಷ ಪರಿಹಾರ ಘೋಷಿಸಿ ನಂತರ ಹಿಂಪಡೆಯಿತು. ಆಂಧ್ರಪ್ರದೇಶದಲ್ಲಿ 10 ಲಕ್ಷ ಘೋಷಿಸಲಾಗಿದೆ. ಆದರೆ ಸರ್ಕಾರದಿಂದ ಯಾರೂ ಇಲ್ಲಿಗೆ ಬಂದು ಸಂತ್ರಸ್ತ ಕುಟುಂಬಗಳಿಗೆ ಧೈರ್ಯ ತುಂಬಲಿಲ್ಲ. ಅವರ ಕಷ್ಟ ಕೇಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಈ ಕೊಲೆಗಳಿಗೆ ಸರ್ಕಾರ ಹಾಗೂ ಚುನಾವಣಾ ಆಯೋಗವೇ ಕಾರಣ ಎಂದು ವಿವಿಧ ನ್ಯಾಯಾಲಯಗಳು ಹೇಳಿವೆ. ಇಷ್ಟಾದರೂ ಸರ್ಕಾರ ಇದಕ್ಕೆ ಕಾರಣರಾದ ಅಧಿಕಾರಿ, ಮಂತ್ರಿಗಳ ಮೇಲೆ ಕ್ರಮ ಕೈಗೊಳ್ಳಲಿಲ್ಲ ಎಂದರೆ ಈ ಸರ್ಕಾರ ಬದುಕಿದೆಯಾ, ಸತ್ತಿದೆಯಾ ಎಂಬುದನ್ನು ಜನರೇ ತೀರ್ಮಾನಿಸಬೇಕು. ವಿರೋಧ ಪಕ್ಷದ ಜವಾಬ್ದಾರಿ ಅರಿತು ನಾವು ಈ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಈ ರಾಜ್ಯದ ಜನರ ಪರವಾಗಿ ನಿಂತು, ಅವರಿಗೆ 2 ಲಕ್ಷ ಪರಿಹಾರ ನೀಡುವಂತೆ ಮಾಡಿದ ಹೈಕೋರ್ಟ್ ಗೆ ರಾಜ್ಯದ ಜನರ ಪರವಾಗಿ ತಲೆಬಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.

- Advertisement -

ಕೆಪಿಸಿಸಿ ಅಧ್ಯಕ್ಷನಾಗಿ ಎಲ್ಲ 36 ಸಂತ್ರಸ್ತರ ಕುಟುಂಬದವರನ್ನು ಇವತ್ತು ಭೇಟಿ ಮಾಡುತ್ತಿದ್ದೇನೆ. ಇವರನ್ನು ಸರ್ಕಾರ ಭೇಟಿ ಮಾಡುತ್ತದೆ ಎಂದು ಕಾದುನೋಡಿದೆ. ಆದರೆ ಅವರು ಭೇಟಿ ಮಾಡಲಿಲ್ಲ. ನಮ್ಮ ಮನಸ್ಸು ತಡೆಯಲಾಗದೆ ಇವರ ಕಷ್ಟ ಕೇಳಿ, ಪಕ್ಷದ ಪರವಾಗಿ 1 ಲಕ್ಷ ಪರಿಹಾರ ನೀಡಿ, ಅವರಿಗೆ ಧೈರ್ಯ ತುಂಬಲು ನಾವು ಇಲ್ಲಿಗೆ ಬಂದಿದ್ದೇವೆ. ಯಡಿಯೂರಪ್ಪನವರು ಶಿವಮೊಗ್ಗದವರೇ ಆಗಿರಬಹುದು, ಆದರೆ ಅವರು ಇಡೀ ರಾಜ್ಯದ ಮುಖ್ಯಮಂತ್ರಿಗಳು ಎಂಬುದನ್ನು ಅವರು ಗಮನದಲ್ಲಿ ಇಟ್ಟುಕೊಳ್ಳಬೇಕು. ನೊಂದವರು, ಸತ್ತವರು ನಮ್ಮವರು ಎಂದು ಭಾವಿಸಬೇಕು. ಮುಖ್ಯ ಮಂತ್ರಿಗಳು ಇಲ್ಲಿಗೆ ಬಂದು ಇವರನ್ನು ಭೇಟಿ ಮಾಡಲು ಆಗದಿದ್ದರೆ, ಮಿಕ್ಕ ಸಚಿವರುಗಳಿಗೆ ಏನಾಗಿತ್ತು? ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಸಚಿವರು, ಕೋವಿಡ್ ಉಸ್ತುವಾರಿ ಹೊತ್ತವರು ಯಾಕೆ ಬರಲಿಲ್ಲ? ಎಲ್ಲರೂ ಬೆಂಗಳೂರಿನಲ್ಲಿ ಪಾಲು ಬೇಕು ಅಂತಾರೆ. ಜನರ ದುಃಖ-ದುಮ್ಮಾನ ಅವರಿಗೆ ಬೇಕಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಕೋವಿಡ್ ನಿಂದ ಸತ್ತವರು 30 ಸಾವಿರ ಅಂತಾ ಸರ್ಕಾರ ಹೇಳುತ್ತಿದೆ. ಅದರೆ 3 ಲಕ್ಷ ಜನರ ಮರಣ ಪ್ರಮಾಣ ಪತ್ರ ಪಡೆಯಲಾಗಿದೆ. ಹೀಗಾಗಿ ಡೆತ್ ಆಡಿಟ್ ಆಗಬೇಕಿದೆ. ಈ ವಿಚಾರವಾಗಿ ಕಾಂಗ್ರೆಸ್ ವಿಧಾನಸೌಧದಲ್ಲಿ ಧ್ವನಿ ಎತ್ತಲಿದೆ. ರಾಷ್ಟ್ರವ್ಯಾಪಿ ಕೋವಿಡ್ ನಿಂದ ಸತ್ತವರಿಗೆ, ಸಮಸ್ಯೆ ಎದುರಿಸಿದವರಿಗೆ ಧೈರ್ಯ ತುಂಬುವ ಕಾರ್ಯಕ್ರಮವನ್ನು ಪಕ್ಷ ಹಮ್ಮಿಕೊಂಡಿದೆ. ರಾಜ್ಯದ ಉದ್ದಗಲಕ್ಕೂ ನಮ್ಮ ಕಾರ್ಯಕರ್ತರು ಮನೆ, ಮನೆಗೆ ಹೋಗಿ ಕೋವಿಡ್ ನಿಂದ ಸತ್ತವರು, ಉದ್ಯೋಗ ಕಳೆದುಕೊಂಡವರು, ಸಂಕಷ್ಟಕ್ಕೆ ಸಿಲುಕಿದವರ ಮಾಹಿತಿ ಸಂಗ್ರಹಿಸಲಿದ್ದಾರೆ. ಅವರಿಗೆ ಪರಿಹಾರ ಕೊಡಿಸಲು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಲಿದ್ದಾರೆ. ಬಿಜೆಪಿಯವರಿಗೆ ಕುರ್ಚಿ ಮುಖ್ಯ. ಜನ ಎಲ್ಲಿ ರೊಚ್ಚಿಗೆದ್ದು ಬಡಿಯುತ್ತಾರೋ ಎಂಬ ಭಯ. ರಾಜ್ಯದಲ್ಲಿ ಜನ ಎಷ್ಟು ಆಕ್ರೋಶಗೊಂಡಿದ್ದಾರೆ ಎಂಬುದನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಆ ಆಕ್ರೋಶಕ್ಕೆ ಹೆದರಿಯೇ ಅವರು ಬರುತ್ತಿಲ್ಲ. ಜನ ಅಧಿಕಾರದಲ್ಲಿ ಇರುವವರನ್ನು ಬೈಯ್ಯುತ್ತಾರೆಯೇ ಹೊರತು  ಇಲ್ಲದವರನ್ನಲ್ಲ. ಜನರ ಜೀವನ ಹಾಳಾಗಿದೆ. ಹೊಸ ಜೀವನ ಆರಂಭಿಸಲು ಅವರಿಗೆ ಆತ್ಮವಿಶ್ವಾಸ ತುಂಬಲು ನಾವು ಇಲ್ಲಿಗೆ ಬಂದಿದ್ದೇವೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

Join Whatsapp