Home ಟಾಪ್ ಸುದ್ದಿಗಳು ಸೋಂಕಿತರನ್ನು ಸರ್ಕಾರವೇ ಕೊಲೆ ಮಾಡಿದ್ದು, ನ್ಯಾಯಾಂಗ ತನಿಖೆ ಆಗಬೇಕು : ಡಿ.ಕೆ. ಶಿವಕುಮಾರ್ ಆಗ್ರಹ

ಸೋಂಕಿತರನ್ನು ಸರ್ಕಾರವೇ ಕೊಲೆ ಮಾಡಿದ್ದು, ನ್ಯಾಯಾಂಗ ತನಿಖೆ ಆಗಬೇಕು : ಡಿ.ಕೆ. ಶಿವಕುಮಾರ್ ಆಗ್ರಹ

ಚಾಮರಾಜನಗರ: ಆಕ್ಸಿಜನ್ ನೀಡದೆ ಕೊರೊನಾ ಸೋಂಕಿತರನ್ನು ಸರ್ಕಾರವೇ ಹತ್ಯೆ ಮಾಡಿದ್ದು, ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.

 ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ ಅವರು ‘ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದವರ ಸಂಖ್ಯೆ ಬಗ್ಗೆ ಮಂತ್ರಿಗಳು ಮಾಧ್ಯಮಗಳಿಗೆ ಕೊಟ್ಟ ಹೇಳಿಕೆಗೂ ವಾಸ್ತವಕ್ಕೂ ಭಾರೀ ವ್ಯತ್ಯಾಸ ಇದೆ. ನಮ್ಮ ಶಾಸಕರ ಮಾತು ಕೇಳಿ ನಾವು ಈ ತೀರ್ಮಾನಕ್ಕೆ ಬಂದಿಲ್ಲ. ನಾವು ಖುದ್ದಾಗಿ ಇಲ್ಲಿಗೆ ಬಂದು ಅಧಿಕಾರಿಗಳ ಬಳಿ ಮಾಹಿತಿ ಪಡೆದ ನಂತರ 24+4 – ಹೀಗೆ ಒಟ್ಟು 28 ಜನ ಸತ್ತಿದ್ದಾರೆ ಎಂದು ತಿಳಿದು ಬಂದಿದೆ. ನಮ್ಮ ಬಳಿ ಸತ್ತವರ ಹೆಸರು, ಊರು, ಸಮಯ ಎಲ್ಲದರ ದಾಖಲೆಯೂ ಇದೆ ಎಂದಿದ್ದಾರೆ.

ನಮಗೆ ನಿನ್ನೆ ಮಾಧ್ಯಮಗಳ ವರದಿ ಮತ್ತು ಮಂತ್ರಿಗಳ ಹೇಳಿಕೆ ನೋಡಿ ಯಾರು ಸುಳ್ಳು ಹೇಳುತ್ತಿದ್ದಾರೆ ಎಂಬ ಬಗ್ಗೆ ಗೊಂದಲ ಇತ್ತು. ಹೀಗಾಗಿ ನಾವು ಇಲ್ಲಿಗೆ ಬಂದು ಖುದ್ದು ಪರಿಶೀಲಿಸಿದ್ದೇವೆ. ಇಲ್ಲಿ ಸತ್ತವರೆಲ್ಲರೂ ಏಕಕಾಲಕ್ಕೆ ಕೊನೆಯುಸಿರು ಎಳೆದಿದ್ದಾರೆ ಎಂದು ತಿಳಿದು ಬಂದಿದೆ. ನಮ್ಮ ಶಾಸಕರು ಹಾಗೂ ಮಾಜಿ ಸಂಸದರಾದ ಧ್ರುವನಾರಾಯಣ್ ಅವರು ಆಕ್ಸಿಜನ್ ಕೊರತೆ ಬಗ್ಗೆ ಮುಖ್ಯ ಕಾರ್ಯದರ್ಶಿಗಳಿಗೇ ಕರೆ ಮಾಡಿ ತಿಳಿಸಿ, ಎಚ್ಚರಿಕೆ ನೀಡಿದ್ದರು. ಅವರು ಕೂಡ ನಾವು ನಿಭಾಯಿಸುತ್ತೇವೆ ಎಂದಿದ್ದರು. ಆದರೆ ಅವರಿಂದ ಇದು ಸಾಧ್ಯವಾಗಿಲ್ಲ. ಹೀಗಾಗಿ ಈ ಸಾವು ಬಗ್ಗೆ ಒಂದು ವಾರದ ಕಾಲಮಿತಿಯಲ್ಲಿ ನ್ಯಾಯಾಂಗ ತನಿಖೆ ಮಾಡಿಸಬೇಕು. ಈ ಸಾವಿಗೆ ಯಾರಾದರೂ ಹೊಣೆ ಹೊರಬೇಕಲ್ಲ. ಸರ್ಕಾರವೇ ಜನರನ್ನು ಕೊಂದಿದ್ದು, ಸಂಬಂಧಪಟ್ಟವರ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಬೇಕು.ರಾಜ್ಯ ಸರ್ಕಾರವೇ ಐಸಿಯುನಲ್ಲಿದ್ದು, ಅದಕ್ಕೇ ಆಕ್ಸಿಜನ್ ಇಲ್ಲದಂತಾಗಿದೆ.  ನಮ್ಮ ಕ್ಷೇತ್ರದಲ್ಲಿಯೂ ಆಕ್ಸಿಜನ್ ಕೊರತೆ ಇದ್ದು, ನಿನ್ನೆ ರಾತ್ರಿ ನಾವು ಮುನ್ನೆಚ್ಚರಿಕೆ ಕೊಟ್ಟ ಮೇಲೆ ಅದನ್ನು ಪೂರೈಸಲಾಗಿದೆ ಎಂದು ಅವರು ಹೇಳಿದ್ದಾರೆ.

Join Whatsapp
Exit mobile version