ಬೆಂಗಳೂರು: ದ.ಕ.ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ಸರಣಿ ಹತ್ಯೆ ಘಟನೆಗಳ ಕುರಿತು ಗೃಹ ಸಚಿವರು ವಿಧಾನ ಸಭೆ ಕಲಾಪದಲ್ಲಿ ಲಿಖಿತ ಹೇಳಿಕೆ ನೀಡಿದ್ದು, ಇದನ್ನು ಗಮನಿಸಿದರೆ ಘಟನೆಗೆ ಸಂಬಂಧಿಸಿ ಪೊಲೀಸರು ನಡೆಸಿದ ತನಿಖಾ ಕಾರ್ಯಾಚರಣೆಯು ಬಿಜೆಪಿ ಸರಕಾರ ಮೊದಲೇ ಸಿದ್ಧಪಡಿಸಿದ ನಿರೂಪಣೆಯಂತಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಅಗ್ನಾಡಿ ಹೇಳಿದ್ದಾರೆ.
ಮಸೂದ್ – ಫಾಝಿಲ್ ಹತ್ಯೆ ಪ್ರಕರಣದ ಆರೋಪಿಗಳು ಸಂಘಪರಿವಾರದ ಸಕ್ರಿಯ ಕಾರ್ಯಕರ್ತರು ಮತ್ತು ಇವು ಕೋಮು ವೈಷಮ್ಯದಿಂದ ನಡೆದ ಹತ್ಯೆಗಳಾಗಿವೆ. ಪೊಲೀಸರು ಬಂಧಿಸಿರುವ ಆರೋಪಿಗಳ ಹಿನ್ನೆಲೆಯನ್ನು ಗಮನಿಸಿದರೆ ಅವರು ಸಂಘಪರಿವಾರದ ವಿವಿಧ ಹುದ್ದೆಗಳಲ್ಲಿರುವವರು ಎಂಬ ವಿಚಾರ ಈಗಾಗಲೇ ಬಯಲಾಗಿದೆ. ಪ್ರವೀಣ್ ಹತ್ಯೆಯೂ ಮಸೂದ್ ಹತ್ಯೆ ಪ್ರತೀಕಾರವಾಗಿ ಸ್ಥಳೀಯರಿಂದಲೇ ನಡೆದ ಕೃತ್ಯ ಎಂಬ ಸಂಗತಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿತ್ತು. ಆದರೆ ರಾಜಕೀಯ ಒತ್ತಡ ಹೆಚ್ಚಾಗುತ್ತಿದ್ದಂತೆಯೇ ಪೊಲೀಸರ ತನಿಖಾ ಶೈಲಿಯೂ ಬದಲಾಗುತ್ತಾ ಬಂತು. ಪ್ರವೀಣ್ ಹತ್ಯೆಗೆ ಸಂಬಂಧಿಸಿ ಮುಸ್ಲಿಮ್ ಯುವಕರನ್ನು ಗುರಿಪಡಿಸಿ ಚಿತ್ರಹಿಂಸೆ ನೀಡಲಾಯಿತು. ತರಾತುರಿಯಲ್ಲಿ ತನಿಖೆಯನ್ನು ಎನ್.ಐ.ಎ.ಗೂ ವಹಿಸಲಾಯಿತು. ನಂತರ ಮುಸ್ಲಿಮ್ ಸಂಘಟನೆಗಳು ನಾಯಕರು ಮತ್ತು ಘಟನೆಗೆ ಯಾವುದೇ ಸಂಬಂಧ ಹೊಂದಿರದ ಯುವಕರ ಮನೆಗಳ ಮೇಲೆ ದಾಳಿ ನಡೆಸಲಾಯಿತು. ಸಂತ್ರಸ್ತ ಕುಟುಂಬಕ್ಕೆ ಪರಿಹಾರ ವಿತರಣೆಯಲ್ಲೂ ತಾರತಮ್ಯ ನಡೆಸಲಾಯಿತು. ಇದೀಗ ರಾಜ್ಯದ ಗೃಹ ಸಚಿವರು ಪೊಲೀಸ್ ತನಿಖೆ ಪೂರ್ಣಗೊಳ್ಳುವ ಮುನ್ನವೇ, ಪ್ರವೀಣ್ ನೆಟ್ಟಾರು ಕೊಲೆ ಕೋಮು ಸಂಬಂಧ ಪ್ರಕರಣ ಮತ್ತು ಮಸೂದ್-ಫಾಝಿಲ್ ಹತ್ಯೆ ಕೋಮು ಪ್ರಕರಣವಲ್ಲ ಎಂದು ತಮ್ಮದೇ ವ್ಯಾಖ್ಯಾನ ನೀಡಿದ್ದಾರೆ. ಮಾತ್ರವಲ್ಲ, ಇವರ ಕುಟುಂಬಗಳಿಗೆ ಪರಿಹಾರ ನೀಡುವ ಪ್ರಸ್ತಾವನೆಯೂ ಇಲ್ಲ ಎಂದಿದ್ದಾರೆ. ಗೃಹ ಸಚಿವರ ಈ ಹೇಳಿಕೆಯನ್ನು ಗಮನಿಸಿದರೆ, ಘಟನೆಗೆ ಸಂಬಂಧಿಸಿ ಪೊಲೀಸರ ತನಿಖಾ ಕಾರ್ಯಾಚರಣೆ ಬಿಜೆಪಿ ಸರಕಾರ ಮೊದಲೇ ಸಿದ್ಧಪಡಿಸಿದ ನಿರೂಪಣೆಗೆ ಪೂರಕವಾಗಿರುವುದನ್ನು ಗಮನಿಸಬಹುದಾಗಿದೆ. ಇದೇ ಕಾರಣಕ್ಕಾಗಿ ಮುಸ್ಲಿಮ್ ಆರೋಪಿಗಳನ್ನು ಯುಎಪಿಎ ಅಡಿಯಲ್ಲಿ ಕಠಿಣವಾಗಿ ದಂಡಿಸುವ ಮತ್ತು ಸಂಘಪರಿವಾರದ ಹಿನ್ನೆಲೆಯ ಆರೋಪಿಗಳಿಗೆ ಒಂದೊಂದಾಗಿಯೇ ಜಾಮೀನು ನೀಡುವ ಪ್ರಕ್ರಿಯೆ ನಡೆಯುತ್ತಿರುವುದು ಕಂಡು ಬರುತ್ತಿದೆ.
ಹತ್ಯೆ ಘಟನೆಗಳನ್ನು ತನ್ನ ರಾಜಕೀಯ ಸ್ವಾರ್ಥಕ್ಕೋಸ್ಕರ ಬಳಸಿಕೊಳ್ಳುತ್ತಿರುವ ಬಿಜೆಪಿ ಸರಕಾರದ ನಡೆ ಖಂಡನಾರ್ಹ. ಇಂತಹ ರಾಜಕೀಯ ಪ್ರೇರಿತ ನಡೆಗಳು ಒಂದು ನಿರ್ದಿಷ್ಟ ಸಮುದಾಯವನ್ನು ಬೇಟೆಯಾಡುವ ಮತ್ತು ಅವರನ್ನು ನ್ಯಾಯದಿಂದ ವಂಚಿತರನ್ನಾಗಿ ಮಾಡುವ ದುರುದ್ದೇಶವನ್ನಷ್ಟೇ ಹೊಂದಿದೆ. ಬಿಜೆಪಿ ಸರಕಾರವು ಇಂತಹ ಪ್ರತೀಕಾರದ ನಡೆಯಿಂದ ಹಿಂದೆ ಸರಿದು ಸರ್ವರಿಗೂ ಸಮಾನ ನ್ಯಾಯ ಕಲ್ಪಿಸುವ ತನ್ನ ಸಾಂವಿಧಾನಿಕ ಹೊಣೆಗಾರಿಕೆಯೊಂದಿಗೆ ಕಾರ್ಯನಿರ್ವಹಿಸಬೇಕು. ಮುಸ್ಲಿಮ್ ಸಮುದಾಯವೂ ಇತರ ಸಮಾನ ಮನಸ್ಕ ನಾಗರಿಕರ ಜೊತೆಗೂಡಿ ಇಂತಹ ಅನ್ಯಾಯದ ಕ್ರಮಗಳ ವಿರುದ್ಧ ಪ್ರಜಾಸತ್ತಾತ್ಮಕ ಹೋರಾಟವನ್ನು ರೂಪಿಸಲು ಮುಂದಾಗಬೇಕೆಂದು ಅಯ್ಯೂಬ್ ಅಗ್ನಾಡಿ ಕರೆ ನೀಡಿದ್ದಾರೆ.