ದಕ್ಷಿಣ ಕನ್ನಡ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಟ್ಟ ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ತೀರ್ಮಾನ?

Prasthutha|

- Advertisement -

ಕಾಂಗ್ರೆಸ್ ಕಟ್ಟಾಳು ಎಂ.ಎಸ್ ಮುಹಮ್ಮದ್‌ಗೆ ದ.ಕ ಜಿಲ್ಲಾ ಕಾಂಗ್ರೆಸ್ ಸಾರಥ್ಯ..?

ಮಂಗಳೂರು : ಲೋಕಸಭಾ ಚುನಾವಣೆಯ ಬೆನ್ನಲ್ಲೇ ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ ನಾಯಕತ್ವಕ್ಕೆ ಮೇಜರ್ ಸರ್ಜರಿ ನಡೆಸಲು ಮುಂದಾಗಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು (ಕೆಪಿಸಿಸಿ) ಹಲವು ಜಿಲ್ಲಾ ಸಮಿತಿಗಳ ಪುನರ್ ರಚನೆಗೆ ಮುಂದಾಗಿದೆ. ಅದರಲ್ಲಿ ದಕ್ಷಿಣ ಕನ್ನಡ ಮತ್ತು ದಾವಣಗೆರೆ ಜಿಲ್ಲಾಧ್ಯಕ್ಷ ಸ್ಥಾನವನ್ನು ಮುಸ್ಲಿಮರಿಗೆ ನೀಡಲು ಚಿಂತನೆ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

- Advertisement -

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಜಿಲ್ಲೆಯ ಹಿರಿಯ ಮುಖಂಡರಾದ ಕಾಂಗ್ರೆಸ್ ಕಟ್ಟಾಳು ಎಂ.ಎಸ್ ಮುಹಮ್ಮದ್ ಅವರ ಹೆಸರು ಬಹುತೇಕ ಅಂತಿಮಗೊಂಡಿದೆ ಎನ್ನಲಾಗುತ್ತಿದೆ.
ಈ ಬಾರಿ ದಕ್ಷಿಣ ಕನ್ನಡ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹುದ್ದೆಯನ್ನು ಮುಸ್ಲಿಮರಿಗೆ ನೀಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಕೆಪಿಸಿಸಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಎರಡು ಅವಧಿಯಲ್ಲಿ ಬಂಟರು ಮತ್ತು ಬಿಲ್ಲವರಿಗೆ ಅವಕಾಶ ನೀಡಿರುವುದರಿಂದ ಈ ಬಾರಿ ಮುಸ್ಲಿಮರಿಗೆ ಅವಕಾಶ ಒದಗಿಸಬೇಕು ಎಂದು ಅವರು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್‌ನ ಮುಸ್ಲಿಂ ಮುಖಗಳಾದ ಕಣಚೂರು ಮೋನು, ಶಾಹುಲ್ ಹಮೀದ್ ಕೆ.ಕೆ ಮತ್ತು ಎಂ.ಎಸ್ ಮುಹಮ್ಮದ್ ಹೆಸರನ್ನು ಕೆಪಿಸಿಸಿ ಪರಿಗಣಿಸಿತ್ತು. ಕಣಚೂರು ಮೋನು ಆಯ್ಕೆಗೆ ಪ್ರಭಾವಿಯೊಬ್ಬರು ವಿರೋಧ ವ್ಯಕ್ತಪಡಿಸಿರುವ ಕಾರಣಕ್ಕೆ, ಶಾಹುಲ್ ಹಮೀದ್ ಕೆ.ಕೆ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಹುದ್ದೆಯಲ್ಲಿರುವುದರಿಂದ ಎಂ.ಎಸ್ ಮುಹಮ್ಮದ್ ಹೆಸರು ಅಂತಿಮಗೊಂಡಿದೆ ಎನ್ನಲಾಗುತ್ತಿದೆ. ಶೀಘ್ರದಲ್ಲೆ ಎಂ.ಎಸ್ ಮುಹಮ್ಮದ್ ಅವರನ್ನು ದಕ್ಷಿಣ ಕನ್ನಡ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಘೋಷಣೆ ಮಾಡಲಾಗುತ್ತೆ ಎಂದು ಕಾಂಗ್ರೆಸ್ ಪಕ್ಷದ ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ.


ಎಂ.ಎಸ್ ಮುಹಮ್ಮದ್ ಅವರಿಗೆ ಅವಕಾಶ ಒಲಿದುಬಂದರೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಮೊಟ್ಟಮೊದಲ ಮುಸ್ಲಿಂ ಅಧ್ಯಕ್ಷ ಎಂಬ ಖ್ಯಾತಿ ಅವರ ಪಾಲಾಗಲಿದೆ. 2013ರ ವಿಧಾನಸಭಾ ಚುನಾವಣೆ ವೇಳೆ ಕೋಡಿಜಾಲ್ ಇಬ್ರಾಹಿಂ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಆ ಸಂದರ್ಭದಲ್ಲಿ ಜಿಲ್ಲೆಯ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಈವರೆಗೆ ದ.ಕ ಜಿಲ್ಲಾ ಕಾಂಗ್ರೆಸ್‌ನ ಪೂರ್ಣಾವಧಿ ಅಧ್ಯಕ್ಷರಾಗಿ ಮುಸ್ಲಿಮರಿಗೆ ಅವಕಾಶ ಒದಗಿಬಂದಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಮರು ಕಾಂಗ್ರೆಸ್ ಪಕ್ಷದ ಅತೀದೊಡ್ಡ ಮತಬ್ಯಾಂಕ್ ಆಗಿದ್ದು ಹಲವು ರಾಜಕೀಯ ಪಲ್ಲಟಗಳು ಮತ್ತು ಎಸ್‌ಡಿಪಿಐ ಪಕ್ಷದ ಬಲವಾದ ಅಸ್ತಿತ್ವದ ನಡುವೆಯೂ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ದೂರತಳ್ಳುತ್ತಿದೆ ಎಂಬ ಭಾವನೆ ಜಿಲ್ಲೆಯ ಮುಸ್ಲಿಮರಲ್ಲಿ ಮೂಡಿರುವುದು ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರ ಗಮನಕ್ಕೆ ಬಂದಿದೆ ಎನ್ನಲಾಗುತ್ತಿದೆ. ಆ ಕಾರಣಕ್ಕೆ ಈ ಬಾರಿ ಮುಸ್ಲಿಮರಿಗೆ ಅವಕಾಶ ನೀಡಲು ಖುದ್ದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಆಡಳಿತ) ಕೆ.ಸಿ ವೇಣುಗೋಪಾಲ್ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Join Whatsapp
Exit mobile version