ಬೆಂಗಳೂರು; ಕುಡಿದ ಅಮಲಿನಲ್ಲಿ ಡಿಜೆಯೊಬ್ಬ ವೇಗವಾಗಿ ಕಾರು ಚಲಾಯಿಸಿ ಸರಣಿ ಅಪಘಾತ ನಡೆಸಿದ್ದರಿಂದ ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಬನಶಂಕರಿಯ ಸುಚಿತ್ರ ಥಿಯೇಟರ್ ಬಳಿ ನಿನ್ನೆ ರಾತ್ರಿ ಸಂಭವಿಸಿದೆ.
ರಾಜಸ್ಥಾನ ಮೂಲದ ಕತ್ಮಾರಾಮ್ (40)ಹಾಗೂ ಕಾತುರಾಮ್ (30)
ಮೃತಪಟ್ಟಿದ್ದು ಅಪಘಾತ ನಡೆಸಿ ಗಾಯಗೊಂಡ ಡಿಜೆ ವಿಶ್ವ ಎಂಬಾತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿಕಿತ್ಸೆ ಪಡೆಯುತ್ತಿರುವ ವಿಶ್ವ ಗುಣಮುಖನಾದ ನಂತರ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಕುಲದೀಪ್ ಕುಮಾರ್ ಜೈನ್ ಅವತು ತಿಳಿಸಿದ್ದಾರೆ.
ಕಾವೇರಿಪುರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಸೋದರ ಸಂಬಂಧಿಗಳಾದ ಅತ್ಮಾರಾಮ್ ಹಾಗೂ ಸೇತುರಾಮ್ ಮರಗೆಲಸ ಮಾಡುತ್ತಿದ್ದು ರಾತ್ರಿ 10ರ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಅತೀ ವೇಗವಾಗಿ ಬಂದ ಕಾರು ಚಲಾಯಿಸಿಕೊಂಡು ಬಂದ ಡಿಜೆ ವಿಶ್ವ, ಮೊದಲಿಗೆ ಬೈಕ್ಗೆ ಡಿಕ್ಕಿ ಹೊಡೆದು, ಬಳಿಕ ರಸ್ತೆ ಬದಿ ನಿಂತಿದ್ದ ಆಟೋಗೆ ಗುದ್ದಿದ್ದಾನೆ. ನಂತರ ಜೆರಾಕ್ಸ್ ಅಂಗಡಿಯೊಂದರ ಮುಂಭಾಗದ ಶಟರ್ ಗೆ ಡಿಕ್ಕಿ ಹೊಡೆದಿದ್ದಾನೆ.
ಅಮಲಿನಲ್ಲಿದ್ದ ವಿಶ್ವ ಅಪಘಾತವೆಸಗಿ ಗಾಯಗೊಂಡು ಕಾರಿನಲ್ಲೇ ಕುಳಿತಿದ್ದ. ಸ್ಥಳೀಯರು ಆತನನ್ನು ಹೊರಗಡೆ ಕರೆತಂದು ರಸ್ತೆ ಬದಿ ಕೂರಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಬನಶಂಕರಿ ಸಂಚಾರ ಪೊಲೀಸರು ಧಾವಿಸಿ ಅಪಘಾತಗೊಂಡ ವಾಹನಗಳನ್ನು ತೆರವುಗೊಳಿಸೊ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.