Home ಕರಾವಳಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ

ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ

ಮಂಗಳೂರು: ಶಿಕ್ಷಣ ಕ್ಷೇತ್ರ ಹಾಗೂ ಶಿಕ್ಷಕರ ಬೇಡಿಕೆಗಳನ್ನು ಕಾಲಕಾಲಕ್ಕೆ ಈಡೇರಿಸುವ ಮೂಲಕ ಸರ್ಕಾರ ವಿದ್ಯಾರಂಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಅವರು ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಿಕ್ಷಕರ ಕಲ್ಯಾಣ ನಿಧಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ, ವಿದ್ಯಾರಂಗಕ್ಕೆ ಕಾಲ ಕಾಲಕ್ಕೆ ಅಗತ್ಯವಿರುವ ಈಡೇರಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿನ ಶಿಕ್ಷಕರ ಕೈಯನ್ನು ಬಲಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ಶಿಕ್ಷಕರು ಉತ್ತಮ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ನವ ಭಾರತ ನಿರ್ಮಾಣದ ಕನಸನ್ನು ಮೂಡಿಸಬೇಕು, ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಈ ಬಗ್ಗೆ ಮನನ ಮಾಡಿಕೊಳ್ಳುವ ಅಗತ್ಯವಿದೆ, ನವ ಭಾರತದ ಕನಸನ್ನು ಹೊಂದಿರುವ ಪ್ರಧಾನಮಂತ್ರಿಗಳು ಜಗತ್ತಿಗೆ ಮಾದರಿಯಾಗುವ ಚಿಂತನೆಗಳೊಂದಿಗೆ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಇದಕ್ಕೆ ಪೂರಕವಾಗಿ ಶಿಕ್ಷಕರು ತಮ್ಮ ಜವಾಬ್ದಾರಿಯಿಂದ ಶಾಲಾ ಆವರಣದಿಂದಲೇ ನವ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡುವ ಸಂಕಲ್ಪ ಮಾಡಬೇಕು, ಶಿಕ್ಷಕರ ದಿನಾಚರಣೆಯು ನವ ಭಾರತ ನಿರ್ಮಾಣದ ಸಿದ್ಧತೆಯ ನಡೆಸುವ ಚಿಂತನ ದಿನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯರಾದ ಎಸ್. ಎಲ್. ಭೋಜೇಗೌಡ ಅವರು ಮಾತನಾಡಿ, ಗುಣಮಟ್ಟದ ಶಿಕ್ಷಣಕ್ಕಾಗಿ ಪೂರಕ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸಿ ಕೊಡಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಬೆಳ್ತಂಗಡಿ ತಾಲೂಕಿನ ಬಸವಗೌಡ ಎಸ್. ಬಿರಾದರ್, ರವೀಂದ್ರ ಡಿ.ಎನ್., ರಾಮಚಂದ್ರ ದೊಡ್ಡಮನಿ, ಬಂಟ್ವಾಳ ತಾಲೂಕಿನ ಪ್ರವೀಣ್ ಬಿ, ಸುನಿಲ್ ಸೀಕ್ವೆರಾ, ರಾಘವೇಂದ್ರ, ಮಂಗಳೂರು ಉತ್ತರ ವಲಯದ ರೋಸ್ಲಿನ್ ಆರ್. ಎಸ್., ನೇತ್ರಾವತಿ, ರಾಜೇಶ್ವರಿ ಕೆ., ಮಂಗಳೂರು ದಕ್ಷಿಣ ವಲಯದ ಬುದಲ್ ಮಜೀದ್, ವಸಂತ ರೈ ಬಿ.ಕೆ., ಸ್ಟೆನಿ ಗೆಬ್ರಿಯಲ್ ತಾಬ್ರೋ, ಮೂಡುಬಿದರೆ ತಾಲೂಕಿನ ಸುಜಾತ, ಜ್ಯೋತಿ ಡಿಸೋಜಾ, ಸುಬ್ರಹ್ಮಣ್ಯ, ಪುತ್ತೂರು ತಾಲೂಕಿನ ಗೋವಿಂದ ನಾಯ್ಕ ಬಿ., ತೆರೇಜ್ ಎಂ ಸಿಕ್ವೇರಾ, ಜಯರಾಮ್ ಶೆಟ್ಟಿ, ಸುಳ್ಯ ತಾಲೂಕಿನ ರೇವತಿ ಕೋಡಿಪಾಡಿ, ಮಾಯಿಲ ಯಾನೆ ಜಿ. ಮಾಯಿಲಪ್ಪ,ಯೋಗೇಶ್ ಸಿ. ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಡಯಟ್ ಉಪ ನಿರ್ದೇಶಕಿ ರಾಜಲಕ್ಷ್ಮೀ ಕೆ. ಪ್ರಶಸ್ತಿ ಪುರಸ್ಕೃತರ ವಿವರ ವಾಚಿಸಿದರು.

ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯಾದ್ಯಕ್ಷ ಎಂ. ಮಾಮಚ್ಚನ್ ಅವರು ರಾಜ್ಯ ಸಭೆಯ ಸಂಸದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸಂದೇಶ ವಾಚಿಸಿದರು. ಪುತ್ತೂರು ಶಾಸಕ ಸಂಜೀವ್ ಮಠಂದೂರು ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಶಿಕ್ಷಣ ಶಿಕ್ಷಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಿಪ್ರಿಯನ್ ಮೊಂತೇರೋ, ಸಹಾಯಕ ಆಯುಕ್ತ ಗಿರೀಶ್ ನಂದನ್, ಡಿವೈಎಸ್ಪಿ ವೀರಯ್ಯ ಹಿರೇಮಠ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ತಹಶೀಲ್ದಾರ್ ನಿಸರ್ಗ ಪ್ರಿಯ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ಸತೀಶ್ ಕುಮಾರ್, ಶಿಕ್ಷಣ ಸಮನ್ವಯಧಿಕಾರಿ ನವೀನ್ ಸ್ಟೀಫನ್ ವೇಗಸ್ ಹಾಗೂ ಇತರರು ವೇದಿಕೆಯಲ್ಲಿದ್ದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುಧಾಕರ್ ಸ್ವಾಗತಿಸಿದರು. ಶಿಕ್ಷಕ ಪ್ರಶಾಂತ್ ಅನಂತಪಡಿ ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ಅತಿಥಿಗಳನ್ನು ಗೌರವಿಸಿದರು.

Join Whatsapp
Exit mobile version