►ಯು.ಟಿ.ಖಾದರ್ ನಮ್ಮ ಸಮಸ್ಯೆಯನ್ನು ಸ್ಪಂದಿಸುವುದನ್ನು ಬಿಟ್ಟು, ಎಲ್ಲೋ ಕ್ರಿಕೆಟ್ ಆಡುತ್ತಿದ್ದಾರೆ
ಮಂಗಳೂರು: ಮಂಗಳೂರು ವಿವಿ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ನಿರಾಕರಿಸಿರುವ ಬೆನ್ನಲ್ಲೇ ಸಂತ್ರಸ್ತ ವಿದ್ಯಾರ್ಥಿನಿಯರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿದ್ದಾರೆ.
ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ಗೌಸಿಯಾ, ಜಿಲ್ಲಾಧಿಕಾರಿಗಳು ಕೂಡ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಎಬಿವಿಪಿ ಪುಂಡರ ಒತ್ತಡದಿಂದಾಗಿ ಹಿಜಾಬ್ ನಿಷೇಧ ಮಾಡಿದ್ದಾರೆ. ನಿಮ್ಮಲ್ಲಿ ದಾಖಲೆ ಇದ್ದರೆ ಕಾನೂನು ಹೋರಾಟ ಮಾಡಿ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ. ಕರ್ನಾಟಕದ ಹಿಜಾಬ್ ವಿವಾದಕ್ಕೂ ಮಂಗಳೂರಿನ ವಿವಾದಕ್ಕೂ ಸಂಬಂಧ ಇಲ್ಲ. ಸಿಂಡಿಕೇಟ್ ಆದೇಶ ಎಬಿವಿಪಿ ಒತ್ತಡದಿಂದ ಬಂದಿದೆ. ಪ್ರತಿಭಟನೆ ಬಳಿಕವೇ ಪ್ರಾಂಶುಪಾಲರು ಈ ಆದೇಶ ಮಾಡಿದ್ದಾರೆ. ಎಬಿವಿಪಿ ಒತ್ತಡ ಬಿಟ್ಟರೆ ಇದರಲ್ಲಿ ಹೈ ಕೋರ್ಟ್ ಆದೇಶ ಪಾಲನೆ ಕಾಣುತ್ತಿಲ್ಲ ಎಂದು ಅವರು ಕಿಡಿಕಾರಿದರು.
ಇದು ಮಂಗಳೂರು ವಿವಿಯಲ್ಲಿ ಮುಗಿಯುವ ವಿಷಯ. ನಾವು ಯು.ಟಿ.ಖಾದರ್ ಅವರ ಬಳಿಯೂ ಹೋಗಿದ್ದೆವು, ಅವರು ಸರಿಯಾಗಿ ಸ್ಪಂದಿಸಿಲ್ಲ. ಅವರು ನಮಗೆ ಸಹಾಯ ಮಾಡುವುದನ್ನು ಬಿಟ್ಟು ಎಲ್ಲೋ ಕ್ರಿಕೆಟ್ ಆಡುತ್ತಿದ್ದಾರೆ. ಧಾರ್ಮಿಕ ಪಂಡಿತರು, ವಿದ್ಯಾರ್ಥಿ ಸಂಘಟನೆಗಳಿಗೆ ನಾವು ಮನವಿ ಮಾಡಿ, ನಮಗೆ ಸಹಾಯ ಮಾಡುವಂತೆ ಕೋರಿದ್ದೇವೆ. ನಮಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಕೋರ್ಟ್ ಗೆ ಹೋದರೆ ಸಮಯ ವ್ಯರ್ಥವಾಗುತ್ತದೆ, ಅದಕ್ಕಾಗಿ ಬೇರೆ ಪರಿಹಾರ ಕೊಡಿ. ನಾಳೆಯೂ ಕಾಲೇಜಿಗೆ ಹೋಗುತ್ತೇವೆ, ಆದರೆ ಅವರು ಒಳಗೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿದರು.