ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಜನರಿಗೆ ಬಹು ಬೇಡಿಕೆಯಾಗಿದ್ದ ಪಡಿತರ ವಿತರಣೆಯಲ್ಲಿ ಸ್ಥಳೀಯವಾಗಿ ದೊರಕುವ ಕೆಂಪು ಕುಚ್ಚಲಕ್ಕಿಯನ್ನು ವಿತರಿಸುವ ಕುರಿತಾಗಿ ಇಂದು ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಕೊಡ್ಗಿ ಭಾಗಿಯಾಗಿದ್ದರು. ಈ ವೇಳೆ ಕರ್ನಾಟಕ ಸರ್ಕಾರದಿಂದ ಜನರಿಗೆ ನೀಡುವ ಪಡಿತರ ಅಕ್ಕಿ ಈ ಭಾಗದ ಜನರು ಬಳಕೆ ಮಾಡುತ್ತಿಲ್ಲ ಮಾತ್ರವಲ್ಲದೆ ದ.ಕ ಮತ್ತು ಉಡುಪಿ ಜಿಲ್ಲೆಯ ಜನರ ಬೇಡಿಕೆ ಅಕ್ಕಿ ಕುಚ್ಚಲಕ್ಕಿ ಒದಗಿಸುವಂತೆ ಈ ಹಿಂದೆ ಆಹಾರ ಸಚಿವರಾಗಿದ್ದ ಖಾದರ್ ಅವರು ಪ್ರಸ್ತಾಪಣೆ ಮಾಡಿದ್ದರು. ಆದರೆ ಜಿಲ್ಲೆಯಲ್ಲಿ ಇದರ ಉತ್ಪಾದನಾ ಪ್ರಮಾಣ ತೀರ ಕಡಿಮೆ ಇದ್ದು ಈ ಅಕ್ಕಿ ಪೂರೈಕೆಯ ಬಗ್ಗೆ ಸರ್ಕಾರ ಚಿಂತಿಸಿಲ್ಲ. ಆದರೆ ಇಂದು ನಡೆದ ಸಭೆಯಲ್ಲಿ ಈ ಭಾಗದ ಜನರ ಬಳಕೆ ಕುಚ್ಚಲಕ್ಕಿ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಶಾಸಕರಾದ ರಾಜೇಶ್ ನಾಯಕ್, ಉಮಾನಾಥ್ ಕೋಟ್ಯಾನ್,ವೇದವ್ಯಾಸ ಕಾಮತ್, ಡಾ. ಭರತ್ ಕುಮಾರ್ ಶೆಟ್ಟಿ, ರೈಸ್ ಮಿಲ್ ಮಾಲೀಕರು ಹಾಗೂ ಇನ್ನಿತರ ಸಂಬಂಧ ಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.