ಚೆನ್ನೈ: ಮೈಸೂರು – ಬೆಂಗಳೂರು ನಡುವಿನ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲು ಕರುವಿಗೆ ಡಿಕ್ಕಿ ಹೊಡೆದ ಪರಿಣಾಮ ರೈಲಿನ ಇಂಜಿನ್’ಗೆ ಹಾನಿಯಾಗಿರುವ ಘಟನೆ ತಮಿಳುನಾಡಿನ ಅರಕ್ಕೋಣಂ’ನಲ್ಲಿ ನಡೆದಿದೆ.
ವಂದೇ ಭಾರತ್ ಎಕ್ಸ್’ಪ್ರೆಸ್’ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ ಒಂದೇ ವಾರದಲ್ಲಿ ಈ ಅಪಘಾತ ನಡೆದಿರುವುದು ವಿಶೇಷ. ಪ್ರತಿ ಗಂಟೆಗೆ 90 ಕಿ.ಮೀ ಶರವೇಗದಲ್ಲಿ ಬಂದ ರೈಲು ಕರುವಿಗೆ ಡಿಕ್ಕಿ ಹೊಡೆದ ಪರಿಣಾಮ ಕರು ಸ್ಥಳದಲ್ಲಿಯೇ ಸಾವನ್ನಪ್ಪಿದೆ.
ಕಳೆದ ಅಕ್ಟೋಬರ್ ನಿಂದ ಇಲ್ಲಿಯ ತನಕ ವಂದೇ ಭಾರತ್ ಐದನೇ ಬಾರಿಗೆ ಅಪಘಾತವಾಗಿದ್ದು, ಈ ಹಿಂದೆ ಉತ್ತರ ಭಾರತದ ಹಲವೆಡೆ ವಂದೇ ಭಾರತ್ ರೈಲು ಹಸು, ಎಮ್ಮೆ, ಎತ್ತುಗೆ ಡಿಕ್ಕಿ ಹೊಡೆದಿತ್ತು.
ಮುಂದಿನ ದಿನಗಳಲ್ಲಿ ರೈಲಿಗೆ ಪ್ರಾಣಿಗಳು ಅಡ್ಡಬರುವುದನ್ನು ತಪ್ಪಿಸಲು ರೈಲ್ವೇ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಕರುವಿನ ಮಾಲಕರನ್ನು ಪತ್ತೆಹಚ್ಚಿ ಪ್ರಕರಣವನ್ನು ದಾಖಲಿಸಿ ಭಾರಿ ದಂಡವನ್ನು ವಿಧಿಸಲು ಯೋಜನೆ ರೂಪಿಸಿದೆ ಎಂದು ದಕ್ಷಿಣ ರೈಲ್ವೇಯ ಚೆನ್ನೈ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಎ ಇಳುಮಲೈ ತಿಳಿಸಿದ್ದಾರೆ.