ಹೊಸದಿಲ್ಲಿ: ಅ.2ರಿಂದ ಒಂದು ತಿಂಗಳ ಒಳಗೆ ಎಲ್ಲ ಸಚಿವಾಲಯಗಳಲ್ಲಿ ಬಾಕಿ ಉಳಿದಿರುವ ದೂರುಗಳನ್ನು ಇತ್ಯರ್ಥಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಸಂಸತ್ ಸದಸ್ಯರು, ರಾಜ್ಯ ಸರಕಾರಗಳಿಂದ ದೂರು ವಿಲೇವಾರಿ, ಸಂಸದೀಯ ಸಮಿತಿಗಳು ನೀಡಿದ ಭರವಸೆಗಳ ಬಾಕಿ ಅನುಷ್ಠಾನ, ಸಾರ್ವಜನಿಕರು ಸಲ್ಲಿಸಿರುವ ದೂರುಗಳನ್ನು ಇತ್ಯರ್ಥಗೊಳಿಸಲು ವಿಶೇಷ ಆಂದೋಲನ ನಡೆಸಲು ನಿರ್ಧರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಎಲ್ಲ ಸಚಿವಾಲಯಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಆಂದೋಲನವನ್ನು ಯಶಸ್ವಿಗೊಳಿಸಲು ಅಗತ್ಯ ಕ್ರಮಗಳನ್ನುಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಕೇಂದ್ರ ಸರಕಾರದ ಸಿಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ ಮೂಲಕ ಸರಕಾರಕ್ಕೆ ಸಲ್ಲಿಕೆಯಾಗುವ ಸಲಹೆ-ದೂರುಗಳನ್ನು ಇತ್ಯರ್ಥಗೊಳಿಸಲಾಗುತ್ತದೆ. ಈ ಉದ್ದೇಶಕ್ಕಾಗಿ ಸೆ. 13ರಿಂದಲೇ ಎಲ್ಲ ಸಚಿವಾಲಯಗಳಲ್ಲಿ ಯಾವ ರೀತಿಯ ದೂರುಗಳನ್ನು ಇತ್ಯರ್ಥಪಡಿಸಬೇಕು ಎಂಬ ಬಗ್ಗೆ ಪರಾಮರ್ಶೆ ನಡೆಯುತ್ತಿದೆ. ಸೆ. 29ರ ವರೆಗೆ ಈ ಪ್ರಕ್ರಿಯೆ ನಡೆಯಲಿದೆ.