Home ಕರಾವಳಿ ಹತ್ಯೆಗೀಡಾಗಿದ್ದ ದಿನೇಶ್ ಕನ್ಯಾಡಿ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡದ ಬಗ್ಗೆ ನಿರಾಶೆಯಾಗಿದೆ : ಕೆ.ಕೆ‌ ಶಾಹುಲ್...

ಹತ್ಯೆಗೀಡಾಗಿದ್ದ ದಿನೇಶ್ ಕನ್ಯಾಡಿ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡದ ಬಗ್ಗೆ ನಿರಾಶೆಯಾಗಿದೆ : ಕೆ.ಕೆ‌ ಶಾಹುಲ್ ಹಮೀದ್

►‘ಮಸೂದ್, ಫಾಝಿಲ್, ಜಲೀಲ್ ಮತ್ತು ದಿನೇಶ್ ಕನ್ಯಾಡಿ ಕೊಲೆ ಪ್ರಕರಣಗಳ ಮರು ತನಿಖೆ ನಡೆಯಬೇಕು’

ಮಂಗಳೂರು : ಸಂಘಪರಿವಾರದ ನಾಯಕನಿಂದ ಹತ್ಯೆಗೀಡಾಗಿದ್ದ ಕಾಂಗ್ರೆಸ್ ಕಾರ್ಯಕರ್ತ ಬೆಳ್ತಂಗಡಿ ತಾಲೂಕಿನ ದಿನೇಶ್ ಕನ್ಯಾಡಿ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡದ ಬಗ್ಗೆ ನಮಗೆ ನಿರಾಶೆಯಾಗಿದೆ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಕೆ.ಕೆ‌ ಶಾಹುಲ್ ಹಮೀದ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಕೊಲೆಯಾದ ಕಾಂಗ್ರೆಸ್ ಕಾರ್ಯಕರ್ತ ಬೆಳ್ತಂಗಡಿ ತಾಲೂಕಿನ ದಿನೇಶ್ ಕನ್ಯಾಡಿ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡದ ಬಗ್ಗೆ ನಮಗೆ ನಿರಾಶೆಯಾಗಿದೆ. ಈ ತಪ್ಪನ್ನು ಸರಿಪಡಿಸುವಂತೆ ನಾವು ಮತ್ತೊಮ್ಮೆ ಸರಕಾರಕ್ಕೆ‌ ಮನವಿ‌ ಸಲ್ಲಿಸಲಿದ್ದೇವೆ. ಅಲ್ಲದೇ ನಮ್ಮ ಎಲ್ಲಾ ಬೇಡಿಕೆಗಳನ್ನು‌ ಪೂರೈಸುವಂತೆಯೂ ಸಿಎಂ ಬಳಿ ಮನವಿ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ಕಳೆದ ವರ್ಷ ನಡೆದ  ಧರ್ಮಾಧಾರಿತ ಕೊಲೆ ಪ್ರಕರಣಗಳಲ್ಲಿ ತಾರತಮ್ಯ ಎಸಗಿದ ಈ ಹಿಂದಿನ ಬಿಜೆಪಿ ಸರಕಾರದ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ನಡೆಸಿರುವ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಹತ್ಯೆಗೊಳಗಾದ ಬೆಳ್ಳಾರೆಯ ಮಸೂದ್, ಮಂಗಳಪೇಟೆಯ ಫಾಝಿಲ್ ಮತ್ತು ಕಾಟಿಪಳ್ಳದ ಜಲೀಲ್ ಕುಟುಂಬಕ್ಕೆ ಸಿದ್ದರಾಮಯ್ಯ ಸರಕಾರ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಆ ಮೂಲಕ  ಸಂತ್ರಸ್ತ ಕುಟುಂಬಗಳಿಗೆ ಸಿದ್ದರಾಮಯ್ಯ ಸರಕಾರ ನ್ಯಾಯ ಒದಗಿಸಿದೆ. ಧರ್ಮದ ಕಾರಣಕ್ಕೆ ಬಿಜೆಪಿ‌ ಸರಕಾರದ ಅವಧಿಯಲ್ಲಿ ಅನ್ಯಾಯಕ್ಕೊಳಗಾದ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಿದ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಕಡೆಯಿಂದ ಧನ್ಯವಾದ ಸಲ್ಲಿಸುತ್ತೇವೆ ಎಂದು ಶಾಹುಲ್ ಹಮೀದ್ ಹೇಳಿದ್ದಾರೆ.

ಕಳೆದ ವರ್ಷ ಸರಣಿ‌ ಹತ್ಯೆಗಳು ನಡೆದಾಗ ಬಸವರಾಜ ಬೊಮ್ಮಾಯಿ ಸರಕಾರ ಕೊಲೆ ಪ್ರಕರಣಗಳ ತನಿಖೆ ಮತ್ತು ಪರಿಹಾರದಲ್ಲಿ ತಾರತಮ್ಯ ಮಾಡಿತ್ತು. ಇದರ ವಿರುದ್ಧ ದ.ಕ‌ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ನಿರಂತರ ಹೋರಾಟ ನಡೆಸಿತ್ತು. ಮಂಗಳೂರಿನ‌ ಪುರಭವನದಲ್ಲಿ ಮೌನ ಪ್ರತಿಭಟನೆ ನಡೆಸಿದ್ದೆವು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಕೊಲೆಯಾದ ಮುಸ್ಲಿಮರ ಕುಟುಂಬಕ್ಕೂ ಪರಿಹಾರ ನೀಡುತ್ತೇವೆ ಎಂದು ಚುನಾವಣೆಯ ಸಮಯದಲ್ಲಿ ನಾವು ಭರವಸೆ ನೀಡಿದ್ದೆವು. ಕಾಂಗ್ರೆಸ್ ಸರಕಾರ ಅಧಿಕಾರ ಬರುತ್ತಿದ್ದಂತೆ‌  ನನ್ನ ನೇತೃತ್ವದಲ್ಲಿ ಅಲ್ಪಸಂಖ್ಯಾತ ಘಟಕದ ನಿಯೋಗ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ‌ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್, ಸ್ಪೀಕರ್ ಯು.ಟಿ ಖಾದರ್ ಮತ್ತು ಸಚಿವ ಜಮೀರ್ ಖಾನ್ ಅವರನ್ನು  ಭೇಟಿಯಾಗಿ ಕೊಲೆಯಾದ ಮಸೂದ್, ಫಾಝಿಲ್, ಜಲೀಲ್ ಮತ್ತು ದಿನೇಶ್ ಕನ್ಯಾಡಿ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದ್ದೆವು. ಪ್ರವೀಣ್ ನೆಟ್ಟಾರು ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಿದಂತೆ, ಉಳಿದ ನಾಲ್ವರ ಕುಟುಂಬಗಳಿಗೂ ತಲಾ 25  ಲಕ್ಷ ರೂಪಾಯಿ  ಪರಿಹಾರ ನೀಡಬೇಕೆಂದು ಬೇಡಿಕೆಯಿಟ್ಟಿದ್ದೆವು. ನಮ್ಮ ಮನವಿಯನ್ನು ಪರಿಗಣಿಸಿರುವ ಕಾಂಗ್ರೆಸ್ ಸರಕಾರ ಮಸೂದ್,‌ಫಾಝಿಲ್, ಜಲೀಲ್‌ ಕುಟುಂಬಕ್ಕೆ ಪರಿಹಾರ ನೀಡಿದೆ. ಜೊತೆಗೆ 2018ರಲ್ಲಿ ಹತ್ಯೆಯಾದ ಕಾಟಿಪಳ್ಳದ ದೀಪಕ್‌ ರಾವ್  ಕುಟುಂಬಕ್ಕೂ 25 ಲಕ್ಷ‌ ರೂ ಪರಿಹಾರ ಘೋಷಿಸಿದೆ ಎಂದು ಅವರು ಹೇಳಿದ್ದಾರೆ.

ಮಸೂದ್, ಫಾಝಿಲ್, ಜಲೀಲ್ ಮತ್ತು ದಿನೇಶ್ ಕನ್ಯಾಡಿ ಕೊಲೆ ಪ್ರಕರಣಗಳ ಮರು ತನಿಖೆ ನಡೆಯಬೇಕು, ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಬೇಕು, ಮತೀಯ ಕಾರಣಕ್ಕೆ ನಡೆದ ಎಲ್ಲಾ  ಕೊಲೆ‌ ಪ್ರಕರಣಗಳ ತನಿಖೆಗಾಗಿ ಎಸ್‌ಐಟಿ‌ ರಚಿಸಬೇಕು, ಪ್ರವೀಣ್ ನೆಟ್ಟಾರು ಪತ್ನಿಗೆ ನೌಕರಿ‌ ಕಲ್ಪಿಸಿದಂತೆ ಉಳಿದ ನಾಲ್ವರ ಕುಟುಂಬದ ಒಬ್ಬರಿಗೆ ಸರಕಾರಿ ಉದ್ಯೋಗ ನೀಡಬೇಕು ಮತ್ತು ಫಾಝಿಲ್ ಕೊಲೆ ಪ್ರಕರಣದಲ್ಲಿ‌ ಶರಣ್ ಪಂಪ್ವೆಲ್  ಅವರನ್ನು ಆರೋಪಿಯನ್ನಾಗಿ ಮಾಡಿ ಅವರನ್ನು ಬಂಧಿಸಿ‌ ಕಠಿಣ ಕ್ರಮ ಜರುಗಿಸಬೇಕು ಎಂಬ ನಮ್ಮ ಮನವಿಯನ್ನು‌ ಮತ್ತೊಮ್ಮೆ ಸರಕಾರದ ಬಳಿ ಕೊಂಡೊಯ್ಯಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Join Whatsapp
Exit mobile version