Home ಕರಾವಳಿ ದಿನೇಶ್ ಕನ್ಯಾಡಿ ಕೊಲೆ ಪ್ರಕರಣ; ಸಮರ್ಪಕ ತನಿಖೆಗೆ ದಲಿತ ಸಂಘಟನೆ ಆಗ್ರಹ

ದಿನೇಶ್ ಕನ್ಯಾಡಿ ಕೊಲೆ ಪ್ರಕರಣ; ಸಮರ್ಪಕ ತನಿಖೆಗೆ ದಲಿತ ಸಂಘಟನೆ ಆಗ್ರಹ

ಮಂಗಳೂರು :  ದಿನೇಶ್ ಕನ್ಯಾಡಿ ಕೊಲೆ ಪ್ರಕರಣದ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಆರೋಪಿಗೆ ಜಾಮೀನು ದೊರೆತಿದ್ದು, ಜಾಮೀನು ರದ್ದು ಪಡಿಸಿ, ಪ್ರಕರಣದ ಸಮರ್ಪಕ ತನಿಖೆ ನಡೆಸಬೇಕು ಎಂದು ದಲಿತ ಸಂಘಟನೆಯ ನಾಯಕರು ಆಗ್ರಹಿಸಿದರು.

ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ  ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ದಲಿತ ನಾಯಕರಾದ ಶೇಖರ ಲಾಯಿಲ ದಿನೇಶ್ ಮನೆಯವರಿಗೆ ಸರಕಾರದಿಂದ 25 ಲ.ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಮೃತ ದಿನೇಶ್ ಮನೆಯವರಿಗೆ ಬೆದರಿಕೆ ಕರೆಗಳು ಬರುತ್ತಿದ್ದು ಅವರಿಗೆ ರಕ್ಷಣೆ ನೀಡಬೇಕು ಎಂದೂ ಇನ್ನೋರ್ವ ದಲಿತ ನಾಯಕ ಆನಂದ್ ಒತ್ತಾಯಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಎಸ್‌ ಪಿ ಸೋನಾವಣೆ, ‘ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮರ್ಪಕವಾಗಿ ತನಿಖೆ ನಡೆಸಲಾಗುತ್ತಿದೆ’ ಎಂದರು.

ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದು ಈ ಬಗ್ಗೆ ದಲಿತ ಕಾಲನಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಅಶೋಕ್ ನಾಯ್ಕ್ ಸಭೆಯಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೋನಾವಣೆ ಅವರು, ಈಗಾಗಲೇ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಆರಂಭಿಸಲಾಗಿದೆ. ಇದನ್ನು ಇನ್ನಷ್ಟು ವ್ಯಾಪಕವಾಗಿ ನಡೆಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಎಎಸ್‌ಪಿ ಕುಮಾರಚಂದ್ರ ಮತ್ತು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಇನ್ಸ್‌ಪೆಕ್ಟರ್ ರಾಮಕೃಷ್ಣ ಉಪಸ್ಥಿತರಿದ್ದರು.

Join Whatsapp
Exit mobile version