Home ಟಾಪ್ ಸುದ್ದಿಗಳು ಅಂಗಾಂಗ ದಾನ ಮಾಡಿದ ಮುಸ್ಲಿಂ ಕುಟುಂಬ: ದಿನೇಶ್ ಗುಂಡೂರಾವ್ ಮೆಚ್ಚುಗೆ

ಅಂಗಾಂಗ ದಾನ ಮಾಡಿದ ಮುಸ್ಲಿಂ ಕುಟುಂಬ: ದಿನೇಶ್ ಗುಂಡೂರಾವ್ ಮೆಚ್ಚುಗೆ

ಬೆಂಗಳೂರು: ಅಂಗಾಂಗ ದಾನ ಮಾಡಿದ ಮುಸ್ಲಿಂ ಕುಟುಂಬದ ಕಾರ್ಯವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶ್ಲಾಘಿಸಿದ್ದಾರೆ. ಅಲ್ಲದೇ ಅಂಗಾಂಗ ದಾನ ಮಾಡಿದ್ದ ಫಾರ್ದಿನ್ ಖಾನ್ ಅವರ ನಿವಾಸಕ್ಕೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿ ಸನ್ಮಾನಿಸಿದ್ದಾರೆ.


ಅಂಗಾಂಗ ದಾನ ನಿಜವಾಗಿಯೂ ಆತ್ಮಚೈತನ್ಯ ನೀಡುವ ಕಾರ್ಯವಾಗಿದೆ. ಮುಸ್ಲಿಂ ಸಮುದಾಯದಲ್ಲಿ ಅಂಗಾಂಗ ದಾನಕ್ಕೆ ಧಾರ್ಮಿಕ ಕಟ್ಟುಪಾಡುಗಳಿವೆ. ಆದರೆ ಫಾರ್ದಿನ್ ಕುಟುಂಬ ಧಾರ್ಮಿಕ ಕಟ್ಟುಪಾಡುಗಳನ್ನು ಮೀರಿ ಅಂಗಾಂಗಳನ್ನು ದಾನ ಮಾಡುವ ಮೂಲಕ 6 ಜನರಿಗೆ ಮರುಜೀವ ನೀಡಿದ್ದಾರೆ ಎಂದು ಹೇಳಿದ್ದಾರೆ.


ಉತ್ತರ ಶಾಂಪುರ ಮುಖ್ಯರಸ್ತೆಯ ನಿವಾಸಿಯಾದ ಹಾಜಿ ಫಿರೋಜ್ ಖಾನ್ ಪುತ್ರನಾದ 22 ವರ್ಷದ ಫಾರ್ದಿನ್ ಖಾನ್ ಜೂನ್ 4 ರಂದು ಮದುವೆ ಸಮಾರಂಭ ಮುಗಿಸಿ ವಾಪಾಸ್ ಬರುತ್ತಿದ್ದಾಗ ತುಮಕೂರಿನ ಶಿರಾ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡರು. ತಕ್ಷಣವೇ ತುರ್ತು ಚಿಕಿತ್ಸೆಗಾಗಿ ಗಾಯಾಳು ಫಾರ್ಧಿನ್ ಖಾನ್ ನನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಫಾರ್ದಿನ್ ಖಾನ್ ಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ಯಶವಂತಪುರ ಬಳಿಯ ಸ್ಪರ್ಶ್ ಆಸ್ಪತ್ರೆಗೆ ಜೂನ್ 5 ರಂದು ದಾಖಲು ಮಾಡಲಾಯಿತು. ಸ್ಪರ್ಶ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಫಾರ್ದಿನ್ ಖಾನ್ ಗೆ ಚಿಕಿತ್ಸೆ ನೀಡಲಾಯಿತು.

ಆದರೆ ಕುಟುಂಬಸ್ಥರ ನಿರಂತರ ಪ್ರಾರ್ಥನೆ ಹಾಗೂ ನುರಿತ ವೈದ್ಯರ ಪರಿಶ್ರಮದ ನಡುವೆಯೂ ದುರ್ದೈವವಶಾತ್ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಜೂನ್ 7 ಬೆಳಗ್ಗೆ 11.55ಕ್ಕೆ ಫಾರ್ದಿನ್ ಖಾನ್ ‘ಮೆದುಳು ನಿಷ್ಕ್ರೀಯ’ಗೊಂಡಿರುವುದಾಗಿ ಆಸ್ಪತ್ರೆಯ ವೈದ್ಯರು ಘೋಷಿಸಿದರು. ಮೂರು ದಿನಗಳ ಜೀವನ್ಮರಣದ ಹೋರಾಟದ ನಂತರ 22 ವರ್ಷದ ಫಾರ್ದಿನ್ ಖಾನ್ ಜೀವನ ಅಂತ್ಯವಾಯಿತು. ಈ ದುಃಖದ ಸನ್ನಿವೇಶದಲ್ಲಿ ಫಾರ್ದಿನ್ ಕುಟುಂಬದವರು ತಮ್ಮ ಮಗನ ದೇಹದ ಅಂಗಾಂಗಳನ್ನು ದಾನ ಮಾಡುವ ದೊಡ್ಡ ನಿರ್ಧಾರ ತೆಗೆದುಕೊಂಡರು. ತಮ್ಮ ಮಗನ ಅಂಗಾಂಗಳನ್ನು ದಾನ ಮಾಡಲು ಸಮ್ಮತ್ತಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಈ ಮೂಲಕ ಆರು ಜನರ ಬದುಕಿಗೆ ಮರುಜೀವ ನೀಡಿದ್ದಾರೆ.

Join Whatsapp
Exit mobile version