ಬೆಂಗಳೂರು: ಶೋಭಾ ಕರಂದ್ಲಾಜೆ ಎಂಪಿಯಾಗೋಕೆ ಬಂದಿದ್ದಾ? ಬೆಂಗಳೂರಿಗೆ ಬೆಂಕಿ ಹಚ್ಚೋಕೆ ಬಂದಿದ್ದಾ?” ಎಂದು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಪ್ರಶ್ನಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸೋಮಶೇಖರ್, ನಗರ್ತಪೇಟೆ ಘಟನೆಯ ವೇಳೆ ‘ತಮಿಳುನಾಡಿನಿಂದ ಬಂದವರು ಕೆಫೆಯಲ್ಲಿ ಬಾಂಬ್ ಇಟ್ಟಿದ್ದಾರೆ’ ಎಂಬ ಶೋಭಾ ಹೇಳಿಕೆಯನ್ನು ಖಂಡಿಸಿದರು. ಡಿವಿ ಸದಾನಂದಗೌಡರು ಕ್ಷೇತ್ರವನ್ನು 10 ವರ್ಷಗಳ ಕಾಲ ಸಂಸತ್ತಿನಲ್ಲಿ ಪ್ರತಿನಿಧಿಸುವ ಮೊದಲು ಡಿಬಿ ಚಂದ್ರೇಗೌಡರು ಅಲ್ಲಿನ ಎಂಪಿಯಾಗಿದ್ದರು. ತಾನು 10 ವರ್ಷಗಳಿಂದ ಶಾಸಕ ಮತ್ತು ಮಂತ್ರಿಯಾಗಿ ಬೆಂಗಳೂರು ಉತ್ತರ ಕ್ಷೇತ್ರದ ಭಾಗವಾಗಿರುವ ಯಶವಂತಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದಾಗಿ ಹೇಳಿದ ಸೋಮಶೇಖರ್, ಈ ಎಲ್ಲ ಅವಧಿಯಲ್ಲಿ ಒಂದೇ ಗಲಭೆ ನಡೆದಿಲ್ಲ, ಆದರೆ ಈ ಸಲ ಟಿಕೆಟ್ ಗಿಟ್ಟಿಸಿರುವ ಶೋಭಾ ಕರಂದ್ಲಾಜೆ ಅಲ್ಲಿಂದ ಗೆಲ್ಲುವ ಮೊದಲೇ ಅಸಂಬದ್ಧ ಮತ್ತು ಮತೀಯ ಗಲಾಟೆಗಳಿಗೆ ಉತ್ತೇಜನ ನೀಡುವ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಬೆಂಗಳೂರು ಒಂದು ಶಾಂತಿಪ್ರಿಯ ನಗರವೆನ್ನುವುದನ್ನು ಶೋಭಾ ಮನಗಾಣಬೇಕು. ಅವರ ಹೇಳಿಕೆಗಳಿಂದಾಗಿ ಖುದ್ದು ತನಗೆ ಕ್ಷೇತ್ರದಲ್ಲಿ ಓಡಾಡಲು ಭಯವಾಗುತ್ತಿದೆ, ಯಾವ ಸಮಯದಲ್ಲಿ ಏನು ನಡೆಯಲಿದೆಯೋ ಅಂತ ಆತಂಕ ಶುರುವಾಗಿದೆ ಎಂದು ಅವರು ಹೇಳಿದರು.