Home ಟಾಪ್ ಸುದ್ದಿಗಳು 25 ಸಂಸದರು ಕಳ್ಳೆಕಾಯಿ ತಿನ್ತಿದ್ದಾರಾ?: ಸಿದ್ದರಾಮಯ್ಯ

25 ಸಂಸದರು ಕಳ್ಳೆಕಾಯಿ ತಿನ್ತಿದ್ದಾರಾ?: ಸಿದ್ದರಾಮಯ್ಯ

ಬೆಂಗಳೂರು:ಡಬಲ್ ಎಂಜಿನ್ ಸರ್ಕಾರ ಬಂದರೆ ರಾಜ್ಯದಲ್ಲಿ ಹಾಲು-ಜೇನಿನ ಹೊಳೆ ಹರಿಯತ್ತದೆ ಎಂದು ಅಮಾಯಕ ಕನ್ನಡಿಗರನ್ನು ನಂಬಿಸಿ ಕಳೆದ ಲೋಕಸಭಾ ಚುನಾವಣೆಯಲ್ಲಿ 25 ಸಂಸದರನ್ನು ಗೆಲ್ಲಿಸಿಕೊಂಡರಲ್ಲಾ, ಆ ಗೆದ್ದವರೇನು ಮಾಡುತ್ತಿದ್ದಾರೆ, ಕಳ್ಳೆಕಾಯಿ ತಿನ್ತಿದ್ದಾರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬರಕ್ಕೆ ಪರಿಹಾರ ಕೊಡಬೇಕಾದವರು ದೆಹಲಿಯಲ್ಲಿ ಕೂತಿದ್ದಾರೆ. ಈ ಬಿಜೆಪಿ ನಾಯಕರು ಬರ ಅಧ್ಯಯನಕ್ಕೆ ರಾಜ್ಯದಲ್ಲಿ ಸುತ್ತಾಡಲು ಹೊರಟಿದ್ದಾರೆ.
25 ಸಂಸದರು ಯಾವತ್ತಾದರೂ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ಬಾಯಿ ಬಿಟ್ಟಿದ್ದಾರಾ? ದೊರೆಯ ತನಕ ದೂರು ಕೊಂಡು ಹೋಗಲಾಗದವರು ಹೊಳೆಯ ತನಕ ಓಟ ಮಾಡಿದರಂತೆ ಎಂಬ ಗಾದೆ ಮಾತಿನಂತಾಗಿದೆ ರಾಜ್ಯ ಬಿಜೆಪಿ ನಾಯಕರ ದಿಕ್ಕೆಟ್ಟ ಬರ ಅಧ್ಯಯನ ಯಾತ್ರೆ ಎಂದು ಸಿಎಂ ಸಂಸದರನ್ನು ತಿವಿದಿದ್ದಾರೆ.

ಬಿಜೆಪಿ ನಾಯಕರೇ, ನಿಮ್ಮದೇ ಪಕ್ಷದ ಸರ್ಕಾರಕ್ಕೆ ಸೇರಿದ ತಜ್ಞರ ತಂಡವೇ ದೆಹಲಿಯಿಂದ ಬಂದು ಕರ್ನಾಟಕದಲ್ಲಿನ ಬರಪರಿಸ್ಥಿತಿಯನ್ನು ಅಧ್ಯಯನ ಮಾಡಿ ಹೋಗಿದೆ. ಈಗ ನೀವು ಅದೇ ಉದ್ದೇಶದಿಂದ ಇನ್ನೊಂದು ಪ್ರವಾಸಕ್ಕೆ ಹೊರಟಿದ್ದೀರಿ ಯಾಕೆ, ನಿಮ್ಮದೇ ಸರ್ಕಾರ ಕಳಿಸಿರುವ ಬರ ಅಧ್ಯಯನ ತಂಡದ ಮೇಲೆ ನಿಮಗೆ ನಂಬಿಕೆ ಇಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನಮ್ಮ ಸರ್ಕಾರದ ಅಧ್ಯಯನದ ಪ್ರಕಾರ ಬರಗಾಲದಿಂದಾಗಿ ಆಗಿರುವ ನಷ್ಟ ಅಂದಾಜು 33,770 ಕೋಟಿ ರೂಪಾಯಿ. ಕೇಂದ್ರ ಸರ್ಕಾರದಿಂದ ನಾವು ಕೇಳಿರುವುದು 17,901 ಕೋಟಿ ರೂಪಾಯಿ ಪರಿಹಾರ. ಕೇಂದ್ರ ಸರ್ಕಾರದಿಂದ ಈ ವರೆಗೆ ನಯಾಪೈಸೆ ಪರಿಹಾರದ ಹಣ ಬಂದಿಲ್ಲ. ಬಿಜೆಪಿ ನಾಯಕರೇ, ರಾಜ್ಯದ ರೈತರ ಬಗ್ಗೆ ನಿಮಗೆ ಪ್ರಾಮಾಣಿಕವಾದ ಕಾಳಜಿ ಹೊಂದಿದ್ದರೆ ಮೊದಲು ಹೆಚ್ಚು ಪರಿಹಾರಕ್ಕಾಗಿ ಒತ್ತಾಯಿಸಿ. ನೀವು ಯಾತ್ರೆ ಮಾಡಬೇಕಾಗಿರುವುದು ರಾಜ್ಯದಲ್ಲಿ ಅಲ್ಲ, ನೀವು ಯಾತ್ರೆ ಹೊರಡಬೇಕಾಗಿರುವುದು ದೆಹಲಿಗೆ. ನಿಮ್ಮ ಪಕ್ಷದ 25 ಲೋಕಸಭಾ ಸದಸ್ಯರನ್ನು ಕಟ್ಟಿಕೊಂಡು ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿಯವರ ಕಾಲಿಗಾದರೂ ಬಿದ್ದು ಬರಪರಿಹಾರಕ್ಕೆ ಹೆಚ್ಚು ಹಣ ಕೊಡುವಂತೆ ಕೇಳಿ. ನಿಮಗೆ ಕೇಳುವ ಧೈರ್ಯ ಇಲ್ಲ ಎಂದಾದರೆ ಪ್ರಧಾನಿ ಜೊತೆ ಭೇಟಿಗಾಗಿ ನನಗಾದರೂ ಒಂದು ಅಪಾಯಿಂಟ್ ಮೆಂಟ್ ಕೊಡಿಸಿ ಬಿಡಿ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

Join Whatsapp
Exit mobile version