Home ಟಾಪ್ ಸುದ್ದಿಗಳು ಮಗುವಿನ ಬಗ್ಗೆ ತಪ್ಪು ಸ್ಕ್ಯಾನಿಂಗ್ ವರದಿ ಡಯಾಗ್ನೋಸ್ಟಿಕ್ ಸೆಂಟರ್’ಗೆ 15 ಲಕ್ಷ ರೂ.ದಂಡ

ಮಗುವಿನ ಬಗ್ಗೆ ತಪ್ಪು ಸ್ಕ್ಯಾನಿಂಗ್ ವರದಿ ಡಯಾಗ್ನೋಸ್ಟಿಕ್ ಸೆಂಟರ್’ಗೆ 15 ಲಕ್ಷ ರೂ.ದಂಡ

ಮಂಡ್ಯ: ತಪ್ಪು ಸ್ಕ್ಯಾನಿಂಗ್ ವರದಿ ನೀಡಿ ಅಸಹಜ ಬೆಳವಣಿಗೆ ಹೊಂದಿದ ಮಗುವಿನ ಜನನಕ್ಕೆ ಕಾರಣವಾದ ಮದ್ದೂರಿನ ಡಿ-2 ಡಯಾಗ್ನೋಸ್ಟಿಕ್ ಸೆಂಟರ್’ಗೆ 15 ಲಕ್ಷ ರೂ.ಗಳ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ ಹೊರಡಿಸಿದೆ.

ಮದ್ದೂರು ತಾಲೂಕು ಗೊರವನಹಳ್ಳಿ ಗ್ರಾಮದ ಮಹೇಶ್ ಅವರು ದೂರು ನೀಡಿದ ಪ್ರಕರಣ ವಿಚಾರಣೆ ನಡೆಸಿದ ವೇದಿಕೆಯ ಅಧ್ಯಕ್ಷೆ ಸಿ.ಎಂ.ಚಂಚಲಾ, ಸದಸ್ಯ ಎಸ್.ವಸಂತಕುಮಾರ ಹಾಗೂ ಮಹಿಳಾ ಸದಸ್ಯೆ ಎಂ.ಎಸ್.ಲತಾ ತೀರ್ಪು ನೀಡಿದ್ದಾರೆ.

ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದ ಸಿಂಧುಶ್ರೀ ಎಂಬುವರು ಗರ್ಭಿಣಿಯಾದ 20ನೇ ವಾರದ ಸ್ಕ್ಯಾನಿಂಗ್ ಪರೀಕ್ಷೆಗಾಗಿ ವೈದ್ಯರ ಬಳಿ ಹೋಗಿದ್ದರು. ನಂತರ ಅವರು ವೈದ್ಯರ ಸಲಹೆ ಮೇರೆಗೆ ಮದ್ದೂರಿನ ಸಾರಿಗೆ ಬಸ್ ನಿಲ್ದಾಣದ ಬಳಿ ಇರುವ ಡಿ-2 ಸ್ಕ್ಯಾನಿಂಗ್ ಸೆಂಟರ್’ಗೆ ತೆರಳಿದ್ದರು. ಆ ಸಮಯದಲ್ಲಿ ಸ್ಕ್ಯಾನಿಂಗ್ ಪರೀಕ್ಷೆ ನಡೆಸಿದ ವೈದ್ಯರು ಭ್ರೂಣದ ಅಸಹಜ ಬೆಳವಣಿಗೆಯನ್ನು ಪತ್ತೆಹಚ್ಚದೆ ತಪ್ಪು ಸ್ಕ್ಯಾನಿಂಗ್ ವರದಿ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಈ ಸ್ಕ್ಯಾನಿಂಗ್ ವರದಿಯನ್ನು ಆಧರಿಸಿ ವೈದ್ಯರು ಸಿಂಧುಶ್ರೀಗೆ ಚಿಕಿತ್ಸೆಯನ್ನು ಮುಂದುವರೆಸಿದ್ದರು. ಆದರೆ, ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಸಿಂಧುಶ್ರೀಗೆ ಹೆರಿಗೆಯಾದಾಗ ಅಸಹಜವಾಗಿ ಬೆಳವಣಿಗೆ ಹೊಂದಿರುವ ಮಗು ಹುಟ್ಟಿದ್ದು ಕಂಡುಬಂದಿದ್ದು, ಇದರಿಂದ ಪೋಷಕರು ಕಂಗಾಲಾದರು. ಆ ಸಮಯದಲ್ಲಿ ವೈದ್ಯರು ಸ್ಕ್ಯಾನಿಂಗ್ ಪರೀಕ್ಷೆ ಸಮಯದಲ್ಲೇ ನೋಡಿಕೊಳ್ಳಲಿಲ್ಲ ಏಕೆ ಎಂದು ಪೋಷಕರನ್ನು ಪ್ರಶ್ನಿಸಿದ್ದಾರೆ. ಹೀಗೆ ತಪ್ಪು ಸ್ಕ್ಯಾನಿಂಗ್ ವರದಿ ನೀಡಿರುವುದು ಗೊತ್ತಿಲ್ಲದೆ ಪೋಷಕರು ಆರೋಗ್ಯವಂತ ಮಗುವನ್ನು ಪಡೆಯಲು ಆಗಲಿಲ್ಲ ಎಂದು ಮಾನಸಿಕ ಚಿಂತೆಗೀಡಾಗಿದ್ದಾರೆ ಎನ್ನಲಾಗಿದೆ.

Join Whatsapp
Exit mobile version