Home ಟಾಪ್ ಸುದ್ದಿಗಳು ಧರ್ಮೇಗೌಡರ ಸಾವಿಗೆ ಹೊಣೆ ಯಾರು?

ಧರ್ಮೇಗೌಡರ ಸಾವಿಗೆ ಹೊಣೆ ಯಾರು?

– ಎನ್. ರವಿಕುಮಾರ್ ಟೆಲೆಕ್ಸ್

ವಿಧಾನಪರಿಷತ್ ಉಪಸಭಾಪತಿ ಎಸ್. ಎಲ್. ಧರ್ಮೇಗೌಡ ಅವರು ರೈಲಿಗೆ ಸಿಕ್ಕು ಅತ್ಯಂತ ಧಾರುಣವಾಗಿ ಸಾವು ಕಂಡಿದ್ದಾರೆ. ಅವರದ್ದು ಆತ್ಮಹತ್ಯೆ ನಿಜ, ಧರ್ಮೇಗೌಡರನ್ನು ಬಲ್ಲವರು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ಈ ಕ್ಷಣಕ್ಕೂ ನಂಬಲು ಸಿದ್ದರಿಲ್ಲ.  ಆದರೆ ಧರ್ಮೇಗೌಡರು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಅವರ ಜೇಬಿನಲ್ಲಿ ಸಿಕ್ಕ ಡೆತ್ ನೋಟ್ ಸಾಕ್ಷಿಯಾಗಿದೆ. ಆತ್ಮಹತ್ಯೆಗೆ ಅಂತಹ ಪ್ರಬಲವಾದ ಕಾರಣಗಳು ಆ ಪತ್ರದಲ್ಲಿಲ್ಲ. ಆದರೆ ಅದರಲ್ಲಿ  ಇತ್ತೀಚೆಗೆ ವಿಧಾನಪರಿಷತ್ ನಲ್ಲಿ ನಡೆದ ವಿದ್ಯಮಾನದ ಬಗ್ಗೆ ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಘಟನೆಯೇ  ಆತ್ಮಹತ್ಯೆ ಗೆ ಕಾರಣ ಎಂಬ ಚರ್ಚೆಗಳು ಕೇಳಿ ಬರುತ್ತಿವೆ.

ಧರ್ಮೇಗೌಡರು ಶಾಸಕರಾಗಿ, ವಿಧಾನಪರಿಷತ್ ಸದಸ್ಯರಾಗಿ, ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ರಾಜಕೀಯ ಜೀವನ ಮುನ್ನಡೆಸಿಕೊಂಡು ಬಂದವರು. ಅವರು ಜೆಡಿಎಸ್ ಗೆ ನಿಷ್ಠರಾಗಿದ್ದರೂ ಎದುರಾಳಿ ಪಕ್ಷದವರೊಂದಿಗೆ ಎಲ್ಲಿಯೂ ಸಂಘರ್ಷಾತ್ಮಕ ರಾಜಕಾರಣಕ್ಕೆ ಇಳಿದವರಲ್ಲ. ದ್ವೇ಼ಷ ಬೆಳೆಸಿಕೊಂಡಂತಹ ಯಾವ ವಿವಾದಗಳನ್ನು ಮೈಮೇಲೆ ಎಳೆದುಕೊಂಡವರಲ್ಲ, ಎಂತಹುದೇ ಸಂದರ್ಭದಲ್ಲೂ  ಧೈರ್ಯ, ಆತ್ಮವಿಶ್ವಾಸ ಕಳೆದುಕೊಂಡದ್ದನ್ನು ಅವರ ಹಿಂಬಾಲಕರು, ಸ್ನೇಹಿತರು, ಅವರನ್ನು ಹತ್ತಿರದಿಂದ ಬಲ್ಲ ಯಾರೊಬ್ಬರು ಕಂಡಿದ್ದಿಲ್ಲ. ಗಂಡೆದೆಯ ವ್ಯಕ್ತಿತ್ವ.  ಕೌಟುಂಬಿಕವಾಗಿ ಅಂತಹ ಯಾವ ಸಮಸ್ಯೆಗಳು ಇರಲಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿತ್ತು. ಸಹೋದರ, ಎಂಎಲ್ ಸಿ ಯೂ ಆಗಿರುವ ಭೋಜೇಗೌಡರೊಂದಿಗೂ ಆಪ್ತತೆ ದಟ್ಟವಾಗಿತ್ತು. ಇನ್ನೂ ರಾಜಕೀಯವಾಗಿ ಉಪಸಭಾಪತಿಯಂತ‌ ಘನ ಹುದ್ದೆಯೇ ಅನಿರೀಕ್ಷಿತವಾಗಿ ದಕ್ಕಿತ್ತು. ಅದರಾಚೆ ಉನ್ನತ ಹುದ್ದೆಯ ಯಾವ ಆಕಾಂಕ್ಷೆಗಳನ್ನು ಅವರು ಯಾವುದೇ ಸಂದರ್ಭದಲ್ಲೂ ವ್ಯಕ್ತಪಡಿಸಿರಲಿಲ್ಲ. ಹೀಗಿದ್ದಾಗ್ಯೂ ಧರ್ಮೇಗೌಡರು ಆತ್ಮಹತ್ಯೆ ಮಾಡಿಕೊಳ್ಳುವಂತ ಪ್ರಬಲ ಕಾರಣವಾದರೂ ಏನಿತ್ತು ಎಂಬ ಮಿಲಿಯನ್ ಪ್ರಶ್ನೆಗಳು ಸದ್ಯಕ್ಕೆ ಎಲ್ಲರನ್ನು ಕಾಡುತ್ತಿವೆ.

ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಆಪ್ತ ಧರ್ಮೇಗೌಡರ ಆತ್ಮಹತ್ಯೆಗೆ ರಾಜಕೀಯ ವ್ಯವಸ್ಥೆ, ವಿಧಾನ ಪರಿಷತ್ತಿನಲ್ಲಿ ನಡೆದ ವಿದ್ಯಮಾನಗಳೇ ಕಾರಣ. ಅವರದ್ದು ‘ರಾಜಕೀಯ ಕೊಲೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇಂತಹ ಸ್ಥಿತಿಗೆ ಕಾರಣ ಯಾರು? ಎಂಬುದು ತನಿಖೆ ಆಗಬೇಕು. ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಈ ಆರೋಪಕ್ಕೆ ಬಿಜೆಪಿ, ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ಕೊಡದೆ ಪ್ರಕರಣವನ್ನು ರಾಜಕೀಕರಣಗೊಳಿಸದೆ ಅಂತರ ಕಾಯ್ದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಹಾಗೊಮ್ಮೆ ಕುಮಾರಸ್ವಾಮಿ ಅವರ ಹೇಳಿಕೆಯಂತೆ ಇತ್ತೀಚೆಗೆ  ವಿಧಾನಪರಿಷತ್ತಿನಲ್ಲಿ ನಡೆದ ರಾಜಕೀಯ ಗಲಾಟೆ ಯೇ ಧರ್ಮೇಗೌಡರ ಆತ್ಮಹತ್ಯೆಗೆ ಕಾರಣ ಎಂಬುದು ನಿಜವಾದರೆ ಅದಕ್ಕೆ ಎಲ್ಲಾ ರಾಜಕೀಯ ಪಕ್ಷಗಳೂ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಸಂವಿಧಾನ ರಿವಾಜ್ಹುಗಳನ್ನು ಕಾಲಕಸವಾಗಿಸಿಕೊಂಡು ತುಳಿದಾಡಿದವರ ದರ್ಪಕ್ಕೆ ಧರ್ಮೇಗೌಡರಂತಹ ಗಟ್ಟಿ ಮನುಷ್ಯನೂ ಕುಸಿದು ಆತ್ಮಹತ್ಯೆಗೆ ತಲೆಯೊಡ್ಡಿಬಿಟ್ಟರಾ? ಇದು ಆತ್ಮಹತ್ಯೆ ಅಲ್ಲ. ಇದೊಂದು ಕೊಲೆಯೇ ಆಗುತ್ತದೆ. ಇದಕ್ಕೆ ಮೂರೂ ಪಕ್ಷಗಳು ಕೊಲೆಪಾತಕರಾಗಿ ಕಟಕಟೆಗೆ ನಿಲ್ಲಬೇಕಾಗುತ್ತದೆ.

ರಾಜಕೀಯ ಮೌಲ್ಯಗಳು , ಸಂವಿಧಾನಿಕ ನಿಯಮಗಳ ಪಾಲನೆ ಮಣ್ಣುಪಾಲಾಗಿ ಯಾವುದೋ ಕಾಲವಾಗಿವೆ. ಈಗ ಉಳಿದಿರುವುದು ಕೇವಲ “ದಂಧೆಕೋರ ರಾಜಕಾರಣ” ಮಾತ್ರ. ಇದಕ್ಕೆ ಯಾರು ಬಲಿಯಾದರೂ ಆಶ್ಚರ್ಯಪಡುವಂತಿಲ್ಲ.

ಧರ್ಮೇಗೌಡರು ಅನೇಕ ಅನುಮಾನ, ಸಂದೇಶಗಳನ್ನು ಬಿಟ್ಟು ಹೋಗಿದ್ದಾರೆ . ಅದು ನಿಷ್ಪಕ್ಷಪಾತ ತನಿಖೆಯಿಂದ ಬಯಲಾಗಬೇಕು. 

Join Whatsapp
Exit mobile version