Home ಟಾಪ್ ಸುದ್ದಿಗಳು ದ್ವೇಷ ಭಾಷಣ ಪ್ರಕರಣ: ಅರ್ಚಕ ನರಸಿಂಗಾನಂದಗೆ ಜಾಮೀನು ಮಂಜೂರು

ದ್ವೇಷ ಭಾಷಣ ಪ್ರಕರಣ: ಅರ್ಚಕ ನರಸಿಂಗಾನಂದಗೆ ಜಾಮೀನು ಮಂಜೂರು

ನವದೆಹಲಿ: ಕಳೆದ ವರ್ಷ ಡಿಸೆಂಬರ್ 17 ರಿಂದ 20 ರವರೆಗೆ ಹರಿದ್ವಾರದಲ್ಲಿ ನಡೆದಿದ್ದ ವಿವಾದಿತ ಧರ್ಮ ಸಂಸದ್‌ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಬಂಧಿತರಾಗಿದ್ದ ಯತಿ ನರಸಿಂಗಾನಂದಗೆ ಜಾಮೀನು ಮಂಜೂರಾಗಿದೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಹೇಳಿಕೆಗಳನ್ನು ನೀಡಬಾರದು, ಪ್ರಚೋದನಾಕಾರಿ ಭಾಷಣ ಮಾಡಬಾರದು ಹಾಗೂ ತನಿಖಾಧಿಕಾರಿಗಳಿಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ.

ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಲ್ಲಿ ದಾಸ್ನಾ ದೇವಸ್ಥಾನದ ಮುಖ್ಯ ಅರ್ಚಕ ಯತಿ ನರಸಿಂಗಾನಂದರನ್ನು ಜನವರಿ 15ರಂದು ಬಂಧಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಸಿಜೆಎಂ ನ್ಯಾಯಾಲಯದ ನ್ಯಾ. ಮುಕೇಶ್ ಚಂದ್ರ ಆರ್ಯ ಅವರು, ನರಸಿಂಗಾನಂದರಿಗೆ ಜಾಮೀನು ನಿರಾಕರಿಸಿದ್ದರು

ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295 (ಧಾರ್ಮಿಕ ಭಾವನೆ ಕೆರಳಿಸುವ ಸಲುವಾಗಿ ಮಾಡುವ ದುರುದ್ದೇಶಪೂರ್ವಕ ಕೃತ್ಯಗಳು), 509 (ಯಾವುದೇ ಮಹಿಳೆಯ ಘನತೆಗೆ ಧಕ್ಕೆ ತರುವುದು), 323 (ಸ್ವಯಂಪ್ರೇರಿತವಾಗಿ ಘಾಸಿ ಉಂಟು ಮಾಡುವುದು), 504 (ಶಾಂತಿ ಭಂಗ) ಮತ್ತು 153A (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ನಿವಾಸ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ವೈಷಮ್ಯ ಬೆಳೆಸುವುದು) ಅಡಿ ಪ್ರಕರಣ ದಾಖಲಿಸಲಾಗಿದೆ.

ಹತ್ಯಾಕಾಂಡ ಮತ್ತು ಮುಸ್ಲಿಮರ ವಿರುದ್ಧ ಶಸ್ತ್ರಾಸ್ತ್ರಗಳ ಬಳಕೆಗೆ ಕರೆ ನೀಡಿದ ಭಾಷಣಗಳ ಮೇಲೆ ದಾಖಲಿಸಲಾದ ಎಫ್‌ಐಆರ್‌ಗಳಲ್ಲಿ ನರಸಿಂಹಾನಂದ ಸೇರಿದಂತೆ 10 ಕ್ಕೂ ಹೆಚ್ಚು ಜನರನ್ನು ಹೆಸರಿಸಲಾಗಿದೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಜಿತೇಂದ್ರ ತ್ಯಾಗಿ ಅಲಿಯಾಸ್ ವಸೀಮ್ ರಿಜ್ವಿಯ ಜಾಮೀನು ಅರ್ಜಿ ತಿರಸ್ಕೃತವಾಗಿತ್ತು. ಹರಿದ್ವಾರ ಧರ್ಮ ಸಂಸದ್‌ನಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡಿದ ದ್ವೇಷ ಭಾಷಣದ ಕುರಿತು ತನಿಖೆ ನಡೆಸುವಂತೆ ಕೋರಿದ್ದ ಪಿಐಎಲ್‌ಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ಉತ್ತರಾಖಂಡ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿತ್ತು.

Join Whatsapp
Exit mobile version