ಬೆಂಗಳೂರು: ಕೆಲವು ಪೊಲೀಸ್ ಅಧಿಕಾರಿಗಳು ಅಪರಾಧ ಹಿನ್ನಲೆಯ ಮತ್ತು ಸಮಾಜ ಘಾತಕ ಶಕ್ತಿಗಳ ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಘಟನೆಯನ್ನು ಉಲ್ಲೇಖಿಸಿ, ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ಅವರು ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಸುತ್ತೋಲೆಯಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ವಾಗತ, ಬೀಳ್ಕೊಡುಗೆ ಸಂದರ್ಭದಲ್ಲಿ ಶಿಸ್ತು ಮತ್ತು ಶಿಷ್ಟಾಚಾರವನ್ನು ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.
ಯಾವುದೇ ಪೊಲೀಸ್ ಅಧಿಕಾರಿಗಳು ಅಪರಾಧ ಹಿನ್ನಲೆಯ, ಸಮಾಜ ಘಾತಕ ಶಕ್ತಿಗಳ ಹಾಗೂ ರೌಡಿ ಶೀಟರ್ಗಳೊಂದಿಗೆ ಯಾವುದೆ ಸಂಬಂಧ ಹೊಂದುವಂತಿಲ್ಲ ಎಂಬುವುದನ್ನು ಸುತ್ತೋಲೆ ಹೊರಡಿಸಿ ಆದೇಶಿಸಿದ್ದಾರೆ.
ಕಡ್ಡಾಯವಾಗಿ ಕೆಳಕಂಡ ಕ್ರಮವನ್ನು ಎಲ್ಲಾ ಪೋಲಿಸರು ಅನುಸರಿಸಬೇಕೆಂದು ಪೊಲೀಸ್ ಮಹಾನಿರೀಕ್ಷಕ ಕಚೇರಿ ಆದೇಶ ಪತ್ರದಲ್ಲಿ ತಿಳಿಸಿದೆ:
ಠಾಣೆಗಳಲ್ಲಿ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ, ಇನ್ನಿತರೆ ಖಾಸಗಿ ಕಾರ್ಯಕ್ರಮ ಆಚರಿಸುವಂತಿಲ್ಲ, ಸಾರ್ವಜನಿಕರ ಹೆಸರಿನಲ್ಲಿ ಅಪರಾಧ ಹಿನ್ನೆಲೆಯುಳ್ಳ ಸಮಾಜ ಘಾತುಕ ವ್ಯಕ್ತಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಿಲ್ಲ, ಖಾಸಗಿ ಕಾರ್ಯಕ್ರಮಗಳಲ್ಲಿ ಸಮವಸ್ತ್ರ ಧರಿಸಿ ಭಾಗವಹಿಸುವುದಾಗಲಿ, ಸಮಾಜಘಾತುಕ ಶಕ್ತಿಗಳೊಂದಿಗೆ ಸಂಪರ್ಕ ಇಟ್ಟುಕೊಳ್ಳುವುದಾಗಲಿ ಅಥವಾ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ.ಖಾಸಗಿ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವ ಮುನ್ನ ಸಂಘಟನೆ, ಸಂಸ್ಥೆಯ ವಿವರವನ್ನು ಸರಿಯಾಗಿ ತಿಳಿದು ಪಾಲ್ಗೊಳ್ಳಬೇಕು. ಇಲಾಖೆಯಿಂದ ಆಯೋಜಿಸಲಾಗುವ ಕಾರ್ಯಕ್ರಮಗಳು ಸಾರ್ವಜನಿಕರ ಅರಿವು ಮತ್ತು ಸಾರ್ವಜನಿಕ ಮತ್ತು ಪೊಲೀಸರ ಸಂಭಂದ ವೃದ್ಧಿಸುವ ಉದ್ದೇಶವಾಗಿರಬೇಕು, ಆಗಮಿಸುವ ಮತ್ತು ನಿರ್ಗಮಿಸುವ ಪೊಲೀಸರಿಗೆ ಸ್ವಾಗತ, ಬೀಳ್ಕೊಡುಗೆ ಆಚರಣೆಯಿಂದ ದೂರವಿರುವುದು ಎಂಬ ಕ್ರಮಗಳನ್ನು ಪೊಲೀಸ್ ಮಹಾನಿರೀಕ್ಷಕ ಕಚೇರಿ ಆದೇಶ ಪತ್ರದಲ್ಲಿ ತಿಳಿಸಿದ್ದು ಕಡ್ಡಾಯವಾಗಿ ಪಾಲಿಸಲು ತಿಳಿಸಿದೆ.