ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿಎಂ ಇಬ್ರಾಹಿಂ ಅವರನ್ನು ವಜಾಗೊಳಿಸಿದ್ದ ಮಾಜಿ ಪ್ರಧಾನಿ ದೇವೇಗೌಡ ಇದೀಗ ಪಕ್ಷದಿಂದಲೇ ಅಮಾನತು ಮಾಡಿದ್ದಾರೆ.
ಕರ್ನಾಟಕ ರಾಜ್ಯ ಘಟಕದ ಪ್ರಸ್ತುತ ಕಾರ್ಯಕಾರಿ ಸಮಿತಿಯು ಪಕ್ಷದ ಸಂಘಟನೆ ಮತ್ತು ಬಲವರ್ಧನೆ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿರುವುದಿಲ್ಲ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಕೈಗೊಂಡಿರುವುದಿಲ್ಲ. ಇದು ಮತ್ತು ಇನ್ನೂ ಕೆಲವು ಕಾರಣಗಳಿಗಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಆದೇಶದಲ್ಲಿ ದೇವೇಗೌಡ ತಿಳಿಸಿದ್ದಾರೆ.
ಕೇರಳ ರಾಜ್ಯದ ತಿರುವನಂತಪುರಂದಲ್ಲಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಕೆ. ಅವರು ಪಕ್ಷದ ಹೆಸರಿನಲ್ಲಿ ಅನಧಿಕೃತವಾಗಿ ಕರೆದಿದ್ದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿ, ರಾಜ್ಯದಲ್ಲಿನ ಜೆಡಿಎಸ್-ಬಿಜೆಪಿ ಹೊಂದಾಣಿಕೆ ಬಗ್ಗೆ ವಿರೋಧಭಾಸ ಹೇಳಿಕೆ ನೀಡಿ, ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಾರೆ. ಈ ಮೇಲಿನ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದಾಗ ಪಕ್ಷದ ಹಿಂದಿನ ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂ ಅವರು ಸಾರ್ವಜನಿಕವಾಗಿ ಪಕ್ಷದ ರಾಷ್ಟ್ರಧ್ಯಕ್ಷರ, ರಾಜ್ಯ ಶಾಸಕಾಂಗ ಪಕ್ಷದ ನಾಯಕರ ವಿರುದ್ಧ ಹಾಗೂ ರಾಜ್ಯದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದೊಂದಿಗೆ ಹೊಂದಾಣಿಕೆ ಬಗ್ಗೆ (ಒಮ್ಮತವಾದ ನಿರ್ಣಯವಾಗಿದ್ದರೂ ಸಹ) ಬಹಿರಂಗವಾಗಿ ಪಕ್ಷ ವಿರೋಧಿ ಹೇಳಿಕೆ ನೀಡಿ, ಪಕ್ಷದ ಹಿತಕ್ಕೆ ಧಕ್ಕೆ ತಂದಿರುತ್ತಾರೆ. ಇಂತಹ ನಡವಳಿಕೆ ಮತ್ತು, ಹೇಳಿಕೆಗಳು ಪಕ್ಷದ ವಿರೋಧಿ ಚಟುವಟಿಕೆಗಳಾಗಿರುತ್ತವೆ ಎಂದು ಆದೇಶದಲ್ಲಿ ದೇವೇಗೌಡರು ಉಲ್ಲೇಖಿಸಿದ್ದಾರೆ.