ದೇವನಹಳ್ಳಿ: ಕೆ.ಐ.ಎ.ಡಿ.ಬಿ ಮೂಲಕ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ರೈತರ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಇಂದು ಸ್ವಯಂಘೋಷಿತ ಬಂದ್ ಗೆ ರೈತರು ಕರೆಕೊಟ್ಟಿದ್ದಾರೆ.
ಈ ಹಿಂದೆ ಹರಳೂರು ಕೈಗಾರಿಕಾ ಪ್ರದೇಶ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗೆ ಹೋಬಳಿಯ 7000 ಎಕರೆಗೂ ಹೆಚ್ಚು ಕೃಷಿ ಭೂಮಿಯನ್ನು ರೈತರು ಕಳೆದುಕೊಂಡಿದ್ದಾರೆ. ಈಗ ಗಾಯದ ಮೇಲೆ ಬರೆ ಎಳೆದಂತೆ, ಹರಳೂರು ಕೈಗಾರಿಕಾ ಪ್ರದೇಶದ ಎರಡನೇ ಹಂತದಲ್ಲಿ 1777 ಎಕರೆ ರೈತರ ಫಲವತ್ತಾದ ಕೃಷಿ ಭೂಮಿ ಭೂಸ್ವಾಧೀನ ಮಾಡಲು ಕೆಐಎಡಿಬಿ ಮುಂದಾಗಿರುವುದು ಶೋಚನೀಯ ಸಂಗತಿಯಾಗಿದ್ದು ಇದನ್ನು ವಿರೋಧಿಸಿ ರೈತರು ಬಂದ್ ಗೆ ಕರೆಕೊಟ್ಟಿದ್ದಾರೆ.
ಇಂದು ನಡೆಯುವ ದೇವನಹಳ್ಳಿ ಸ್ವಯಂ ಘೋಷಿತ ಬಂದ್ ಗೆ ಬೆಂಬಲಿಸುವಂತೆ ಒತ್ತಾಯಿಸಿ ನಮ್ಮ ಭೂಮಿ ನಮ್ಮ ಹಕ್ಕು ಎಂದು ಘೋಷಣೆ ಕೂಗುತ್ತಾ ಪೊಲೀಸರ ವಿರೋಧದ ನಡೆವೆಯೂ ನಿನ್ನೆ ರೈತರು ಪಂಜಿನ ಮೆರವಣಿಗೆ ನಡೆಸಿದ್ದರು.