ಸ್ಫೋಟಕ ವಸ್ತುಗಳ ಪತ್ತೆ: ಜನತೆ ಮುಂದೆ ವಾಸ್ತವಾಂಶ ಬಹಿರಂಗಪಡಿಸಲು ಪಾಪ್ಯುಲರ್ ಫ್ರಂಟ್ ಆಗ್ರಹ

Prasthutha|

ಬೆಂಗಳೂರು: ಬಾಗಲಕೋಟೆಯ ಹೊನ್ನಕಟ್ಟಿ ಎಂಬಲ್ಲಿ ಅಪಾರ ಪ್ರಮಾಣದ ಸ್ಪೋಟಕ ವಸ್ತುಗಳು ಪತ್ತೆಯಾಗಿದ್ದು, ಇದರ ಹಿಂದಿರುವ ಪಿತೂರಿಯನ್ನು ಕೂಡಲೇ ಬಹಿರಂಗಪಡಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ಆಗ್ರಹಿಸಿದ್ದಾರೆ.

- Advertisement -

ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಹೊನ್ನಕಟ್ಟಿ ಗ್ರಾಮದ ಹೊರವಲಯದಲ್ಲಿರುವ ಫಾರ್ಮ್ ಹೌಸ್ನಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಸುಮಾರು 500 ಕೆ.ಜಿ. ಸ್ಫೋಟಕ ಪತ್ತೆಯಾಗಿವೆ. ಜೊತೆಗೆ ವಿಜಯ್, ಮಂಜುನಾಥ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಇಂತಹ ಅಕ್ರಮ ಸ್ಫೋಟಕ ದಾಸ್ತಾನು ಪತ್ತೆಯಾಗುತ್ತಿರುವುದು ಹೊಸ ವಿಚಾರವೇನಲ್ಲ.

ಕಳೆದ ವರ್ಷಾರಂಭದಲ್ಲಿ ಶಿವಮೊಗ್ಗದಲ್ಲಿ ನಡೆದ ಪ್ರಬಲ ಸ್ಫೋಟದಲ್ಲಿ 15ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಮತ್ತೊಂದೆಡೆ ಅಕ್ರಮ ಸ್ಪೋಟಕ ತುಂಬಿದ್ದ ಎರಡು ಲಾರಿಗಳೂ ಪತ್ತೆಯಾಗಿದ್ದವು. ಚಿಕ್ಕಬಳ್ಳಾಪುರದಲ್ಲಿ ನಡೆದ ಸ್ಫೋಟದಲ್ಲಿ 6 ಮಂದಿ ಮೃತರಾಗಿದ್ದರು.

- Advertisement -

ಭಯೋತ್ಪಾದನಾ ಕೃತ್ಯಗಳಿಗೆ ಬಳಸಲಾಗುವ ಸ್ಫೋಟಕಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುದ್ದಿಗಳು ರಾಜ್ಯದ ವಿವಿಧ ಜಿಲ್ಲೆಗಳಿಂದ ವರದಿಯಾಗಿವೆ. ಕಳೆದ ಆಗಸ್ಟ್ ನಲ್ಲಿ ಮಂಗಳೂರಿನಲ್ಲಿ 1725 ಕೆ.ಜಿ. ಸ್ಫೋಟಕ ಪತ್ತೆಯಾಗಿದ್ದು, ಅಕಸ್ಮಾತ್ ಇದು ಸ್ಫೋಟಿಸಿದ್ದರೆ ಮಂಗಳೂರಿನಲ್ಲಿ ಅಪಾರ ಪ್ರಮಾಣದ ಸಾವು-ನೋವು ಸಂಭವಿಸುತ್ತಿತ್ತು. ಈ ಘಟನೆಗೆ ಸಂಬಂಧಿಸಿ ಆನಂದ ಗಟ್ಟಿ ಎಂಬಾತನ ಬಂಧನವೂ ನಡೆದಿತ್ತು. ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿ ಭೀತಿಯ ವಾತಾವರಣ ಸೃಷ್ಟಿಸಲಾಗಿತ್ತು.

ಘಟನೆಯ ಆರೋಪಿ ಆದಿತ್ಯ ರಾವ್ ನನ್ನು ಮಾನಸಿಕ ಅಸ್ವಸ್ಥನೆಂದು ಬಿಂಬಿಸಿದ ಬಳಿಕ ಆ ವಿಚಾರವೂ ನಗಣ್ಯವಾಗಿತ್ತು. ಬೆಳ್ತಂಗಡಿಯ ಇಳಂತಿಲದಲ್ಲಿ ನಿವೃತ್ತ ಯೋಧ ಜಯಕುಮಾರ್ ಪೂಜಾರಿಯ ಮನೆಯ ರಸ್ತೆ ಪಕ್ಕದಲ್ಲೂ ಇತ್ತೀಚಿಗೆ ಅಪಾಯಕಾರಿ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದ್ದು, ಇದು ಭಾರತೀಯ ಸೇನೆಯಲ್ಲಿ ಬಳಸುವ ಸ್ಫೋಟಕವಾಗಿದೆ ಎಂದು ಹೇಳಲಾಗಿದೆ.

ಸಮಗ್ರ ತನಿಖೆಗೂ ಮೊದಲು, ಅಕ್ರಮ ಸ್ಫೋಟಕಗಳು ದೊರೆತರೆ ಅದು ಕಲ್ಲು ಕ್ವಾರಿಗೆ ಬಳಸುವ ಸ್ಫೋಟಕಗಳು ಮತ್ತು ಆರೋಪಿಯ ಬಂಧನವಾದರೆ ಧರ್ಮಧಾರಿತವಾಗಿ ಆತನನ್ನು ಮಾನಸಿಕ ಅಸ್ವಸ್ಥನೆಂದು ಬಿಂಬಿಸುವ ಪ್ರವೃತ್ತಿ ನಿರಂತರವಾಗಿ ನಡೆಯುತ್ತಾ ಬಂದಿದೆ ಎಂದು ಅವರು ಆರೋಪಿಸಿದ್ದಾರೆ.

ಅಲ್ಲಲ್ಲಿ ಅಪಾರ ಪ್ರಮಾಣದಲ್ಲಿ ಅಕ್ರಮ ಸ್ಫೋಟಕಗಳು ಪತ್ತೆಯಾಗುತ್ತಿರುವುದು ಕಳವಳಕಾರಿಯಾಗಿದೆ. ಕೆಲವೊಂದು ಕಲ್ಲು ಕ್ವಾರಿ ಸ್ಫೋಟಿಸಲು ಬಳಸುತ್ತಿದ್ದರೆ, ಮತ್ತೆ ಕೆಲವು ಭಯೋತ್ಪಾದನಾ ಕೃತ್ಯಗಳಿಗೆ ಬಳಸಲಾಗುತ್ತಿದೆ. ಅಕ್ರಮ ದಾಸ್ತಾನಿರುವ ಸ್ಫೋಟಕಗಳು ಸ್ಪೋಟಗೊಂಡು ಈಗಾಗಲೇ ವ್ಯಾಪಕ ನಷ್ಟ ಸಂಭವಿಸಿದೆ. ಅಕ್ರಮ ಸ್ಫೋಟಕ ಸಂಗ್ರಹಣೆ ಗಂಭೀರ ಅಪರಾಧವಾಗಿದೆ.

ಕಲ್ಲುಕ್ವಾರಿಯಾಗಲೀ, ಭಯೋತ್ಪಾದನಾ ಕೃತ್ಯವಾಗಲೀ ಆರೋಪಿಗಳ ಹಿನ್ನೆಲೆಯನ್ನು ಎಲ್ಲಾ ಆಯಾಮಗಳಲ್ಲಿ ಸಮಗ್ರ ತನಿಖೆ ನಡೆಸಿ ವಾಸ್ತವಾಂಶ ಬಹಿರಂಗಪಡಿಸಬೇಕಾದ ಹೊಣೆಗಾರಿಕೆ ಪೊಲೀಸ್ ಇಲಾಖೆ ಮೇಲಿದೆ. ಈ ನಿಟ್ಟಿನಲ್ಲಿ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ರಾಜ್ಯದ ಜನರ ಆತಂಕವನ್ನು ದೂರಮಾಡಬೇಕೆಂದು ಎ.ಕೆ.ಅಶ್ರಫ್ ಒತ್ತಾಯಿಸಿದ್ದಾರೆ.

Join Whatsapp