ಲಕ್ನೋ: ವ್ಯಾಲೆಂಟೈನ್ ದಿನ ಇಲ್ಲವೇ ಪ್ರೇಮಿಗಳ ದಿನದಂದು ದನಗಳನ್ನು ಪೂಜಿಸಬೇಕು ಎಂದು ಉತ್ತರ ಪ್ರದೇಶದ ಪಶು ಸಂಗೋಪನಾ ಮಂತ್ರಿ ಧರ್ಮಪಾಲ್ ಸಿಂಗ್ ಕರೆ ನೀಡಿದ್ದಾರೆ.
ಪ್ರೇಮಿಗಳ ದಿನದಂದು ದನಗಳಿಗೆ ರೊಟ್ಟಿ ಮತ್ತು ಬೆಲ್ಲ ತಿನ್ನಿಸಿ ಆಶೀರ್ವಾದ ಪಡೆಯಬೇಕು ಎಂದು ಅವರು ಸೂಚಿಸಿದ್ದಾರೆ.
ಫೆಬ್ರವರಿ 14ರ ವ್ಯಾಲೆಂಟೈನ್ ದಿನವನ್ನು ಪ್ರೇಮಿಗಳ ದಿನವೆಂದು ಆಚರಿಸಲಾಗುತ್ತಿದೆ. ಆ ದಿನವನ್ನು ರೊಟ್ಟಿ ಬೆಲ್ಲದ ಮೂಲಕ ದನಗಳಲ್ಲಿ ನಂಬಿಕೆ ಮತ್ತು ಪ್ರೀತಿಯನ್ನು ತೋರಿಸಬೇಕು ಮತ್ತು ದನದ ತಲೆ ಕುತ್ತಿಗೆ ಮುಟ್ಟಿ ಆಶೀರ್ವಾದ ಪಡೆಯಬೇಕು ಎಂದು ಮಂತ್ರಿ ತಿಳಿಸಿದ್ದಾರೆ.
ಗಾವೊ ವಿಶ್ವಾಸ್ಯ ಮಾತರ ಎಂದರೆ ದನವು ಜಗತ್ತಿನ ತಾಯಿ ಎಂದು ವೇದಗಳಲ್ಲಿ ಹೇಳಲಾಗಿದೆ ಎಂದೂ ಅವರು ಹೇಳಿದರು.
“ತಾಯಿ ದನಕ್ಕೆ ಯಾವಾಗಲೂ ಸೇವೆ ಸಲ್ಲಿಸುವುದಾಗಿ ಈ ಸಂದರ್ಭದಲ್ಲಿ ಪ್ರತಿಜ್ಞೆ ಸ್ವೀಕರಿಸಬೇಕು. ಭಾರತೀಯ ಸಮಾಜದಲ್ಲಿ ಎಲ್ಲ ಉಪವಾಸ ವ್ರತ, ಹಬ್ಬ, ಪೂಜೆ, ಸಂಪ್ರದಾಯಗಳಲ್ಲಿ ಹಸುವಿನ ಉತ್ಪನ್ನಗಳನ್ನು ಬಳಸಬೇಕು. ದನವು ಭಾವನಾತ್ಮಕ, ಧಾರ್ಮಿಕ ಮಹತ್ವದಷ್ಟೇ ಅಲ್ಲ, ಅದು ನಮ್ಮ ಸಮಾಜದ ಅವಶ್ಯಕತೆಗಳನ್ನೆಲ್ಲ ಪೂರೈಸುತ್ತದೆ. ಆ ಕಾರಣಕ್ಕಾಗಿಯೂ ಫೆಬ್ರವರಿ 14ರ ವ್ಯಾಲೆಂಟೈನ್ ದಿನದಂದು ನಾವು ತಾಯಿ ದನಕ್ಕೆ ವಿಶೇಷ ಪ್ರೀತಿ ತೋರಿಸಬೇಕು ಹಾಗೂ ಇತರರಲ್ಲೂ ಈ ಬಗ್ಗೆ ಅರಿವು ಮೂಡಿಸಬೇಕು” ಎಂದು ಮಂತ್ರಿ ಧರ್ಮಪಾಲ್ ಸಿಂಗ್ ತಿಳಿಸಿದರು.
ದನವನ್ನು ಮುನ್ನೆಲೆಗೆ ತರುವುದರಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದವರಲ್ಲಿ ಮಂತ್ರಿ ಧರ್ಮಪಾಲ್ ಸಿಂಗ್ ಅವರು ತೀರಾ ಇತ್ತೀಚಿನ ಹೇಳಿಕೆಯಾಗಿದೆ.
ವಿಶೇಷವೆಂದರೆ ಕೇಂದ್ರ ಸರಕಾರದ ಎಡಬ್ಲ್ಯುಬಿಐ- ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಫೆಬ್ರವರಿ 14ರ ವ್ಯಾಲೆಂಟೈನ್ ದಿನವನ್ನು ದನ ಆಲಿಂಗಿಸುವ ದಿನವೆಂದು ಆಚರಿಸಲು ಹೇಳಿದ್ದನ್ನು ವಾಪಸು ಪಡೆದ ಮರುದಿನ ಉಪ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದಾರೆ.
ದನ ಆಲಂಗಿಸುವ ದಿನ ಭಾರೀ ಟೀಕೆಗಳ ಬಳಿಕ ಹಿಂಪಡೆದುಕೊಳ್ಳಲಾಗಿದೆ. ವ್ಯಾಲೆಂಟೈನ್ ದಿನವು ಪಾಶ್ಚಾತ್ಯ ಸಂಸ್ಕೃತಿಯಾಗಿದ್ದು ಭಾರತೀಯತೆಯೊಳಗೆ ತೂರುತ್ತಿದೆ ಎಂದು ಹಿಂದೂ ಸಂಘಟನೆಗಳವರು ಅದನ್ನು ವಿರೋಧಿಸುತ್ತಿದ್ದಾರೆ.
ಹೋಳಿ ದಿನದಂದೂ ಹಸುವಿನ ಸೆಗಣಿಯನ್ನೇ ಬಳಸಬೇಕು ಅದು ಪರಿಸರ ಸ್ನೇಹಿ ಹಾಗೂ ವಾಯು ಮಾಲಿನ್ಯ ತೊಲಗಿಸುತ್ತದೆ ಎಂದೂ ಧರ್ಮಪಾಲ್ ಸಿಂಗ್ ಹೇಳಿದ್ದಾರೆ.
ಪ್ರೇಮಿಗಳ ದಿನವನ್ನು ವಿರೋಧಿಸಿರುವ ಶ್ರೀ ರಾಮ ಸೇನೆಯವರು ಉದ್ಯಾನ, ಪಾರ್ಲರ್ ಮತ್ತು ಹೋಟೆಲ್ ಗಳ ಮೇಲೆ ಹದ್ದಿನ ಕಣ್ಣು ಇಟ್ಟಿರುವುದಾಗಿ ಹೇಳಿದ್ದಾರೆ.
ನಾವು ಪ್ರತಿ ವರ್ಷವೂ ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸುತ್ತ ಬಂದಿದ್ದೇವೆ ಎಂದು ಶ್ರೀರಾಮ ಸೇನೆಯ ದೇಶೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ವ್ಯಾಲೆಂಟೈನ್ ದಿನದ ಹೆಸರಿನಲ್ಲಿ ಮಾದಕ ದ್ರವ್ಯ ಮತ್ತು ಲೈಂಗಿಕತೆ ನಡೆಯುವುದನ್ನು ನಾವು ಕಾನೂನು ಪ್ರಕಾರ ತಡೆಯುವುದಾಗಿಯೂ ಅವರು ಹೇಳಿದರು.