Home ಟಾಪ್ ಸುದ್ದಿಗಳು ವಿಧಾನಪರಿಷತ್ ಉಪಸಭಾಪತಿಯಾಗಿ ಎಂ.ಕೆ. ಪ್ರಾಣೇಶ್ ಆಯ್ಕೆ

ವಿಧಾನಪರಿಷತ್ ಉಪಸಭಾಪತಿಯಾಗಿ ಎಂ.ಕೆ. ಪ್ರಾಣೇಶ್ ಆಯ್ಕೆ

ಬೆಳಗಾವಿ: ವಿಧಾನ ಪರಿಷತ್ ಉಪ ಸಭಾಪತಿಯಾಗಿ ಎಂ.ಕೆ ಪ್ರಾಣೇಶ್ ಆಯ್ಕೆಯಾಗಿದ್ದಾರೆ.


ಶುಕ್ರವಾರ 11 ಗಂಟೆಗೆ ವಿಧಾನ ಪರಿಷತ್ ಉಪ ಸಭಾಪತಿ ಆಯ್ಕೆಗೆ ಚುನಾವಣೆ ನಡೆದಿದ್ದು, ಎಂ,ಕೆ ಪ್ರಾಣೇಶ್ ನಾಮಪತ್ರ ಸಲ್ಲಿಸಿದ್ದರು. 39 ಮತ ಪಡೆಯುವ ಮೂಲಕ ಸಭಾಪತಿಯಾಗಿ ಎಂ,ಕೆ ಪ್ರಾಣೇಶ್ ಆಯ್ಕೆಯಾಗಿದ್ದಾರೆ.


ಕಾಂಗ್ರೆಸ್ ನ ಅರವಿಂದ ಅರಳಿ 26 ಮತ ಪಡೆದರು. ಪ್ರಸ್ತಾವದ ಪರವಾಗಿ 39 ಮತಗಳು ಬಂದಿವೆ. ಪ್ರಸ್ತಾವದ ವಿರೋಧವಾಗಿ 26 ಮತಗಳು ಬಂದವು. ಅಂತಿಮವಾಗಿ ಪ್ರಾಣೇಶ್ ಅವರು ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆಂದು ಸಭಾಪತಿ ಬಸವರಾಜ್ ಹೊರಟ್ಟಿ ಘೋಷಣೆ ಮಾಡಿದರು.

ಪ್ರಾಣೇಶ್ ಅವರು ಸರ್ವ ಸದಸ್ಯರ ವಿಶ್ವಾಸ ಮತ್ತು ಪ್ರೀತಿಯನ್ನು ಗಳಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಎಂ.ಕೆ.ಪ್ರಾಣೇಶ್ ಅವರು ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಟ ಮಾಡಿ ಪರಿಹಾರವನ್ನು ಪಡೆಯುವ ಸಜ್ಜನ ರಾಜಕಾರಣಿ. ಅವರ ನಡೆ, ನುಡಿ ಎರಡೂ ಒಂದು. ಬಹಳ ಸೌಮ್ಯ ಸ್ವಾಭಾವದವರು. ಅವರ ಮಾತುಗಳು ಕೂಡ  ಬಹಳ ಸೌಮ್ಯ.  ಎಲ್ಲಾ ಪಕ್ಷ, ಪಂಗಡಗಳನ್ನು ಮೀರಿ ಅವರು ಸ್ನೇಹ ಬೆಳೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ತಮ್ಮದೇ ಪಾತ್ರ ವಹಿಸಿದರು. ಆ ಭಾಗದ ರೈತರ, ಕಾಡಂಚಿನ ಜನರು, ಬುಡ ಕಟ್ಟು ಜನಾಂಗದವರ, ಕಾಫಿ ಬೆಳೆಗಾರರ ಸಮಸ್ಯೆ ಇರಬಹುದು. ಚಿಕ್ಕಮಗಳೂರಿನ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಒಡನಾಡಿಯಾಗಿ ಎಲ್ಲ ಸಮಸ್ಯೆಗಳಿಗೆ  ಸ್ಪಂದಿಸುವ ವ್ಯಕ್ತಿಯಾಗಿ, ಒಂದು ದಶಕಕ್ಕೂ ಹೆಚ್ಚಿನ ಕಾಲ ಕೆಲಸ ಮಾಡಿದ್ದಾರೆ ಎಂದರು.

ಶಕ್ತಿ, ಸಾಮರ್ಥ್ಯವಿದೆ

 ಕಳೆದ ಬಾರಿ ಉಪಸಭಾಪತಿಯಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಉತ್ತಮ ಸಭಾಪತಿಗಳು ಪರಿಷತ್ತಿಗೆ ದೊರೆತಿದ್ದು, ಕೆಲಸದ ಭಾರವನ್ನು ನಿಭಾಯಿಸುವ ಶಕ್ತಿ, ಸಾಮರ್ಥ್ಯ ಅವರಲ್ಲಿದೆ. ಸದನವನ್ನು ಅತ್ಯಂತ ಸುಗಮವಾಗಿ ಮತ್ತು ಯಶಸ್ವಿಯಾಗಿ ನಡೆಸಲು ಸಾಧ್ಯವಾಗಲಿದೆ. ಪ್ರಾಣೇಶ್ ಅವರು ತಮ್ಮ ಗಟ್ಟಿ ನಿಲುವನ್ನು ಹಲವಾರು ಬಾರಿ ಪ್ರದರ್ಶಿಸಿದ್ದಾರೆ. ಆ ನಿಲುವಿನಿಂದ ಇಡೀ ಸದನವನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಅವಶ್ಯಕತೆ ಇದೆ ಎಂದರು.

ಅಧ್ಯಯನಶೀಲ ಚರ್ಚೆಗಳಿಗೆ ಅವಕಾಶ

ಪ್ರಜಾಪ್ರಭುತ್ವದಲ್ಲಿ ಹಲವಾರು ಬಾರಿ ಪಕ್ಷಗಳ ನಿಲುವಿನ ಬಗ್ಗೆ ಮಾತನಾಡುತ್ತೇವೆ. ಸಾರ್ವಜನಿಕ ಹಿತಾಸಕ್ತಿ, ನಾಡಿನ ನೆಲ, ಜಲದ ಪ್ರಶ್ನೆ ಇರಬಹುದು. ಅಥವಾ  ನಾಡಿನ ಜ್ವಲಂತ ಸಮಸ್ಯೆ ಗಳನ್ನು ಬಗೆಹರಿಸುವ ಸಂದರ್ಭದಲ್ಲಿ ನಾವು ಎಲ್ಲವನ್ನೂ ಮೀರಿ, ಎತ್ತರದಲ್ಲಿ ನಿಂತು, ಪರಿಹಾರವನ್ನು ಕಂಡುಕೊಳ್ಳುವುದು ಅಗತ್ಯ. ಎಲ್ಲರಿಗೂ ಇದು ಅನ್ವಯಿಸುತ್ತದೆ. ವಿಶೇಷವಾಗಿ ದೊಡ್ಡ ಸ್ಥಾನದಲ್ಲಿ ಕುಳಿತುಕೊಳ್ಳುವವರ ಜವಾಬ್ದಾರಿ ಬಹಳ ದೊಡ್ಡದಿದೆ. ಸಾಮಾನ್ಯವಾಗಿ ಮೇಲ್ಮನೆಯಿಂದ ವಿಭಿನ್ನವಾದ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಈ ಮನೆಯಲ್ಲಿ ಒಳ್ಳೆ ರೀತಿಯ, ಆಳವಾದ, ವಿಷಯಾಧಾರಿತ ಚರ್ಚೆಯಾಗುತ್ತದೆ ಮತ್ತು ಹಲವಾರು ಕಾನೂನು ರಚಿಸುವ ಸಂದರ್ಭದಲ್ಲಿ ಹೊಸ ಆಯಾಮ, ಬೆಳಕನ್ನು ಚೆಲ್ಲಲ್ಲು ಈ ಸದನದಲ್ಲಿ ಅವಕಾಶವಿದೆ. ಅಧ್ಯಯನಶೀಲ ಚರ್ಚೆಗಳಾಗಬೇಕೆನ್ನುವುದು ಜನರ ನಿರೀಕ್ಷೆ. ಅದಕ್ಕೆ ತಾವು ಹೆಚ್ಚಿನ ಅವಕಾಶ ಮತ್ತು ಒತ್ತು ನೀಡುವ ಅಗತ್ಯವಿದೆ. ಹಿರಿಯ ವಿಧಾನ ಪರಿಷತ್ ಸದಸ್ಯರಾಗಿರುವ ಸಭಾಪತಿ ಗಳಿಗೆ ಅಪಾರ ಅನುಭವವಿದೆ. ಆ ಅನುಭವದ ಜೊತೆಗೆ ಕ್ರಿಯಾಶೀಲತೆಯನ್ನು ಜೊತೆಗೂಡಿಸಿ, ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ  ಪಡೆದು, ಸದನವನ್ನು ಅತ್ಯುತ್ತಮವಾಗಿ ನಡೆಸಲು ಸಾಧ್ಯ. ಈ ವಿಧಾನಮಂಡಲದ ಅಂತಿಮ ಘಟ್ಟದಲ್ಲಿದ್ದು, ಈ ಸಂದರ್ಭದಲ್ಲಿ ಹಲವಾರು ವಿಚಾರಗಳು ಬರಲಿವೆ. ಇವೆಲ್ಲವನ್ನೂ ಸೂಕ್ತವಾಗಿ ನಿಭಾಯಿಸುತ್ತಾರೆಂಬ ನಂಬಿಕೆ ಇದೆ ಎಂದರು.

Join Whatsapp
Exit mobile version