Home ಟಾಪ್ ಸುದ್ದಿಗಳು ಜಾತಿ ಕಾರಣಕ್ಕೆ ಆರ್‌ಎಸ್‌ಎಸ್‌ ಕಚೇರಿಗೆ ಪ್ರವೇಶ ಕೊಡಲಿಲ್ಲ: ಗೂಳಿಹಟ್ಟಿ ಶೇಖರ್‌

ಜಾತಿ ಕಾರಣಕ್ಕೆ ಆರ್‌ಎಸ್‌ಎಸ್‌ ಕಚೇರಿಗೆ ಪ್ರವೇಶ ಕೊಡಲಿಲ್ಲ: ಗೂಳಿಹಟ್ಟಿ ಶೇಖರ್‌

ಚಿತ್ರದುರ್ಗ: ನಾನು ‘ಮೇಲಿನ’ ಜಾತಿಯವನಲ್ಲ ಎಂಬುದಕ್ಕೆ ಮಹಾರಾಷ್ಟ್ರದಲ್ಲಿನ ನಾಗ್ಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹೆಡಗೇವಾರ್‌ ವಸ್ತುಸಂಗ್ರಹಾಲಯಕ್ಕೆ ಪ್ರವೇಶ ನೀಡಲಿಲ್ಲ ಎಂದು ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ. ನಾಗಪುರದ ಆರ್‌ಎಸ್‌ಎಸ್‌ ಕಚೇರಿ ಭೇಟಿಯ ಸಂದರ್ಭದಲ್ಲಿ ಉಂಟಾದ ಕಹಿ ಅನುಭವದ ಅಸಮಾಧಾನವನ್ನು ಆಡಿಯೊ ರೂಪದಲ್ಲಿ ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದಾರೆ.

ನಾನು ಚುನಾವಣೆ ಘೋಷಣೆಯಾಗುವುದಕ್ಕೂ ಮೂರು ತಿಂಗಳ ಹಿಂದೆ ಮಹಾರಾಷ್ಟ್ರದ ನಾಗಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿಗೆ ಭೇಟಿ ನೀಡಿದ್ದೆ. ಪರಿಶಿಷ್ಟ ಜಾತಿಗೆ ಸೇರಿದವನಾದರೂ ಹಿಂದುತ್ವದ ಬಗ್ಗೆ ನನಗೆ ಹೆಮ್ಮೆ ಇರೋನು ನಾನು. ಖುಷಿಯಿಂದಲೇ ಅಲ್ಲಿಗೆ ತೆರಳಿದ್ದೆ. ಆದರೆ, ಹೆಡಗೇವಾರ್‌ ವಸ್ತುಸಂಗ್ರಹಾಲಯ ಪ್ರವೇಶಕ್ಕೆ ಅವಕಾಶ ನಿರಾಕರಿಸಿ ಕಹಿ ಅನುಭವ ಉಂಟಾಯಿತು’ ಎಂದು ಅವರು ಬೇಸರ ಹೊರಹಾಕಿದ್ದಾರೆ.

ವಸ್ತು ಸಂಗ್ರಹಾಲಯಕ್ಕೆ ಬರುವವರ ಮಾಹಿತಿಯನ್ನು ಪ್ರವೇಶ ದ್ವಾರದಲ್ಲಿ ಸಂಗ್ರಹಿಸಲಾಗುತ್ತಿತ್ತು. ಪುಸ್ತಕದಲ್ಲಿ ನಾನೂ ಹೆಸರು ನೋಂದಾಯಿಸಿ ಒಳಗೆ ಹೆಜ್ಜೆ ಇಡುತ್ತಿದ್ದಾಗ ವ್ಯಕ್ತಿಯೊಬ್ಬರು ತಡೆದರು. ಪರಿಶಿಷ್ಟ ಜಾತಿಗೆ ಸೇರಿದವರಿಗೆ ಪ್ರವೇಶವಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ನನ್ನೊಂದಿಗೆ ಇದ್ದ ಮೋಹನ್‌ ವೈದ್ಯ ಹಾಗೂ ಮಂಜು ಎಂಬುವರು ಮಾತ್ರ ಒಳಗೆ ಹೋದರು. ನಾನು ಹೊರಗೆ ಕಾಯುತ್ತ ಕುಳಿತುಕೊಳ್ಳಬೇಕಾಯಿತು ಎಂದು ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ. ನನ್ನನ್ನು ಒಳಗೆ ಬಿಡದಿರುವ ಬಗ್ಗೆ ಆರೆಸ್ಸೆಸ್ ಮುಖಂಡ ಬಿ.ಎಲ್‌.ಸಂತೋಷ್‌ ಅವರು ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Join Whatsapp
Exit mobile version