Home ಟಾಪ್ ಸುದ್ದಿಗಳು ನೋಟು ರದ್ದು ಸಂಸತ್ತು ಮಾಡಬೇಕೇ ಹೊರತು ಸರಕಾರವಲ್ಲ, ನೋಟು ಅಮಾನ್ಯೀಕರಣ ಕಾನೂನು ಬಾಹಿರ; ಭಿನ್ನ ತೀರ್ಪು...

ನೋಟು ರದ್ದು ಸಂಸತ್ತು ಮಾಡಬೇಕೇ ಹೊರತು ಸರಕಾರವಲ್ಲ, ನೋಟು ಅಮಾನ್ಯೀಕರಣ ಕಾನೂನು ಬಾಹಿರ; ಭಿನ್ನ ತೀರ್ಪು ಪ್ರಕಟಿಸಿದ ಜಸ್ಟಿಸ್ ನಾಗರತ್ನ

ನವದೆಹಲಿ: ರಿಸರ್ವ್ ಬ್ಯಾಂಕಿನ ಕೇಂದ್ರೀಯ ಮಂಡಳಿಯ ಜೊತೆಗೆ ಮಾತುಕತೆ ನಡೆಸಿದ ಬಳಿಕ ಸರ್ವೋಚ್ಚ ನ್ಯಾಯಾಲಯದ ಐವರು ನ್ಯಾಯಾಧೀಶರ ವಿಶೇಷ ಪೀಠವು ಮೋದಿ ಸರಕಾರದ ನೋಟು ರದ್ದು ಪ್ರಕ್ರಿಯೆಯು ಸರಿ ಎಂದು ಬಹುಮತದಿಂದ ತೀರ್ಪು ನೀಡಿದೆ.

ಆದರೆ ನ್ಯಾಯಮೂರ್ತಿ ಬಿ. ವಿ. ನಾಗರತ್ನ ಅವರು ಈ ತೀರ್ಪನ್ನು ಒಪ್ಪದೆ ಭಿನ್ನ ತೀರ್ಪು ಪ್ರಕಟಿಸಿದರು. “ನೋಟು ರದ್ದತಿ ತೀರ್ಪನ್ನು ಸಂಸತ್ತಿನಲ್ಲಿ ಕಾನೂನು ತಂದು ಮಾಡಬೇಕೇ ಹೊರತು, ಕೇಂದ್ರ ಸರಕಾರವೇ ನೇರ ರದ್ದು ಪಡಿಸುವುದಲ್ಲ” ಎಂದು ಜಸ್ಟಿಸ್ ನಾಗರತ್ನ ತೀರ್ಪಿತ್ತರು.

ನೋಟು ಅಮಾನ್ಯೀಕರಣ ಕುರಿತ ಕೇಂದ್ರದ ಅಧಿಸೂಚನೆ ಕಾನೂನುಬಾಹಿರ ಎಂದು ನಾಗರತ್ನ ಹೇಳಿದರು..

2016ರಲ್ಲಿ ಮೋದಿ ಸರಕಾರವು ರೂ. 1,000 ಮತ್ತು ರೂ. 500ರ ನೋಟುಗಳನ್ನು ರದ್ದು ಮಾಡಿತ್ತು.

ನೋಟು ರದ್ದನ್ನು ಪ್ರಮಾಣಾನುಗುಣವಾಗಿ ಸರಿಯಲ್ಲ ಎಂದು ಹೇಳಲಾಗದು ಹಾಗೂ ರದ್ದು ಆದ ನೋಟುಗಳನ್ನು ಬದಲಾಯಿಸಿಕೊಳ್ಳಲು ನೀಡಿದ 52 ದಿನಗಳ ಕಾಲಾವಕಾಶವನ್ನು ಅವಾಸ್ತವಿಕವೆಂದು ಸಹ ಕೋರ್ಟು ಹೇಳಲಿಕ್ಕಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಒಕ್ಕೂಟ ಸರಕಾರವು ಭಾರತೀಯ ರಿಸರ್ವ್ ಬ್ಯಾಂಕಿನ ಜೊತೆಗೆ ಈ ಸಂಬಂಧ ಆರು ತಿಂಗಳ ಕಾಲ ವಿಚಾರ ವಿನಿಮಯ ಮಾಡಿದ ಬಳಿಕ ತೀರ್ಮಾನ ತೆಗೆದುಕೊಂಡಿತ್ತು ಎಂದು ಐವರು ನ್ಯಾಯಾಧೀಶರ ಪೀಠದ ನಾಲ್ವರು ನ್ಯಾಯಮೂರ್ತಿಗಳು ತೀರ್ಪಿತ್ತರು.

2016ರ ನವೆಂಬರ್ ನಲ್ಲಿ ಕೇಂದ್ರ ಸರಕಾರವು ರೂ. 1,000 ಮತ್ತು ರೂ. 500ರ ನೋಟುಗಳನ್ನು ರದ್ದು ಪಡಿಸಿದ್ದನ್ನು ಪ್ರಶ್ನಿಸಿ 58 ಅರ್ಜಿಗಳು ಸುಪ್ರೀಂ ಕೋರ್ಟಿನಲ್ಲಿ ದಾಖಲಾಗಿದ್ದವು. ಒಂದೇ ರಾತ್ರಿಯಲ್ಲಿ ಸರಕಾರವು ಚಲಾವಣೆಯಲ್ಲಿದ್ದ 10 ಲಕ್ಷ ಕೋಟಿ ಮೌಲ್ಯದ ನೋಟುಗಳನ್ನು ರದ್ದು ಪಡಿಸಿತ್ತು.

 ಒಂದು ಮೂರ್ತ ರೂಪದ ಪರಿಹಾರ ಸಾಧ್ಯವಿಲ್ಲವಾದ್ದರಿಂದ ಕೋರ್ಟು ಈ ವಿಷಯವಾಗಿ ತೀರ್ಪು ನೀಡಲಾಗದು. ಇದು ಕಾಲವನ್ನು ಹಿಂದಕ್ಕೆ ಒಯ್ದಂತೆ ಮತ್ತು ಬಡಿದ ಮೊಟ್ಟೆಯನ್ನು ಕೂಡಿಸಿದಂತೆ ಎಂದು ಸರಕಾರದ ಪರ ವಾದಿಸಲಾಯಿತು.

ಅಲ್ಲದೆ ನಕಲಿ ನೋಟು, ಉಗ್ರರಿಗೆ ಧನ ಸಹಾಯ, ಕಪ್ಪು ಹಣ ಮತ್ತು ತೆರಿಗೆ ವಂಚನೆ ತಪ್ಪಿಸಲು ಸರಕಾರವು ತೀವ್ರ ವಿಚಾರಿಸಿದ ಬಳಿಕವೇ ನೋಟು ರದ್ದು ಮಾಡಿದೆ ಎಂದು ಸಹ ಸರಕಾರದ ಪರ ಕೋರ್ಟಿಗೆ ಹೇಳಲಾಯಿತು.

ನ್ಯಾ. ನಾಗರತ್ನಅವರ ಭಿನ್ನತೀರ್ಪಿನ ಪ್ರಮುಖಾಂಶಗಳು:

  • * ಗೆಜೆಟ್ ಅಧಿಸೂಚನೆ ಮೂಲಕ ನೋಟು ಅಮಾನ್ಯಗೊಳಿಸಿದ ಕ್ರಮ ಕಾನೂನುಬಾಹಿರವಾಗಿದೆ. ಅಲ್ಲದೆ 2016ರ ಕಾಯಿದೆ ಮತ್ತು ಅಧಿಸೂಚನೆ ಕೂಡ ಅಕ್ರಮ. ಆದರೆ ಅದನ್ನು 2016ರಲ್ಲಿ ಮಾಡಿದ್ದರಿಂದ ಈಗ ಅದೇ ಸ್ಥಿತಿಯನ್ನು ಮರಳಿ ತರಲು ಸಾಧ್ಯವಿಲ್ಲ.
  • * ದೇಶದಲ್ಲಿ ಚಲಾವಣೆಯಲ್ಲಿರುವ 86%ರಷ್ಟು ಕರೆನ್ಸಿಯನ್ನು ರದ್ದುಗೊಳಿಸಲಾಗಿದೆ ಎಂದು ಅರ್ಜಿದಾರರು ಹೇಳುತ್ತಾರೆ. ಜನರ ಸಾಮಾಜಿಕ- ಆರ್ಥಿಕ ಸಂಕಷ್ಟಗಳನ್ನು ಒಳಗೊಂಡಿರುವ ವಿವಿಧ ಪರಿಣಾಮಗಳ ಬಗ್ಗೆ ಆರ್‌ಬಿಐ ಯೋಚಿಸಿದೆಯೇ ಎಂಬ ಕುರಿತು ನನಗೆ  ಆಶ್ಚರ್ಯವಾಗುತ್ತದೆ
  • * ಕೇಂದ್ರ ಸರ್ಕಾರದ ಆದೇಶದ ಮೇರೆಗೆ ನೋಟು ಅಮಾನ್ಯೀಕರಣವು ಬ್ಯಾಂಕ್‌ಗಳು ಮಾಡುವುದಕ್ಕಿಂತ ನಾಗರಿಕರ ಮೇಲೆ ಪರಿಣಾಮ ಬೀರುವಂತಹ ಗಂಭೀರ ಸಮಸ್ಯೆಯಾಗಿದೆ. ಆದ್ದರಿಂದ, ನನ್ನ ದೃಷ್ಟಿಯಲ್ಲಿ, ಕೇಂದ್ರದ ಅಧಿಕಾರ ವಿಶಾಲವಾಗಿದ್ದು, ಇದನ್ನು ಪೂರ್ಣ ಕಾಯಿದೆಯ ಮೂಲಕ ಮಾಡಬೇಕಿತ್ತು.
  • * ಸಂಸತ್ತು ಇಲ್ಲದೆ, ಪ್ರಜಾಪ್ರಭುತ್ವ  ವಿಕಸನಗೊಳ್ಳಲು ಸಾಧ್ಯವಿಲ್ಲ… ಇಂತಹ ಮಹತ್ವದ ನಿರ್ಧಾರ ಕೈಗೊಳ್ಳುವಾಗ ಸಂಸತ್ತನ್ನು ದೂರ ಇಡುವಂತಿಲ್ಲ.
  • * ನೋಟು ಅಮಾನ್ಯೀಕರಣದ ಬಳಿಕ ₹ 2,000 ನೋಟು ಬಿಡುಗಡೆಯಾಗಿರುವುದರಿಂದ ಕೇಂದ್ರವು ನೋಟು ರದ್ದತಿ ಮೂಲಕ ಸಾಧಿಸಲು ಬಯಸಿದ್ದ ಗುರಿ ಈಡೇರದೇ ಹೋಗಿರಬಹುದು.
  • ಆರ್‌ಬಿಐನ ಕೇಂದ್ರೀಯ ಮಂಡಳಿಯ ಅಭಿಪ್ರಾಯವು ಸಾಧಕಬಾಧಕಗಳ ಪರಿಗಣಿತವಾಗಿರಬೇಕಿದ್ದು, ಸ್ವತಂತ್ರವೂ, ನಿರ್ಭೀತವೂ ಆಗಿರಬೇಕಿದೆ. ಋಣಾತ್ಮಕ ಶಿಫಾರಸಿನ ಸಂದರ್ಭದಲ್ಲಿ  ಕಾನೂನು ಅಥವಾ ಸುಗ್ರೀವಾಜ್ಞೆಯ ಮೂಲಕ ಮಾತ್ರ ಮುಂದುವರಿಯಬಹುದಾಗಿದೆ.
Join Whatsapp
Exit mobile version