Home ಟಾಪ್ ಸುದ್ದಿಗಳು ಗುತ್ತಿಗೆ ಶುಶ್ರೂಷಾಧಿಕಾರಿಗಳ ಖಾಯಮಾತಿ, ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಆಗ್ರಹ

ಗುತ್ತಿಗೆ ಶುಶ್ರೂಷಾಧಿಕಾರಿಗಳ ಖಾಯಮಾತಿ, ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಆಗ್ರಹ

►ಕಣ್ಣೀರು ಹಾಕಿದ ಗುತ್ತಿಗೆ ಮಹಿಳಾ ಶುಶ್ರೂಷಾಧಿಕಾರಿ ಸಿಬ್ಬಂದಿ

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಆಸ್ಪತ್ರೆಗಳಲ್ಲಿ ಒಳ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಶುಶ್ರೂಷಾಧಿಕಾರಿಗಳಿಗೆ ಸಮಾನ ಕೆಲಸಕ್ಕೆ ಸಮಾನ ವೇತನ, ಕೆಲಸ ಖಾಯಂ ಮಾಡುವಂತೆ ಶುಶ್ರೂಷಾಧಿಕಾರಿಗಳು ಆಗ್ರಹಿಸಿದ್ದಾರೆ.

ಬೆಂಗಳೂರಿನ ಪ್ರೆಸ್’ಕ್ಲಬ್’ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಮ್ಮ ಕರ್ನಾಟಕ ಗುತ್ತಿಗೆ ಶುಶ್ರೂಷಾಧಿಕಾರಿಗಳ ಕ್ಷೇಮಾಭಿವೃದ್ಧಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ರಾಧಾ, ಉಪಾಧ್ಯಕ್ಷ ಸಂಗಮೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಶುಶ್ರೂಷಾಧಿಕಾರಿಗಳು ಸಮಾರು ಇಪ್ಪತ್ತು ವರ್ಷಗಳಿಂದ ಕಡಿಮೆ ಸಂಬಳ ಪಡೆದುಕೊಂಡು ಸರ್ಕಾರದ ಯಾವುದೇ ಸೌಲಭ್ಯವಿಲ್ಲದೆ ಗ್ರಾಮೀಣ ಪ್ರದೇಶ, ನಗರ ಪ್ರದೇಶಗಳಲ್ಲಿರುವ ಸರ್ಕಾರಿ ಆಸ್ಪತ್ರೆ ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಂತಹವರನ್ನು ಗುರುತಿಸಿ ಅವರಿಗೆ ಮಾನವೀಯತೆ ಆಧಾರದ ಮೇರೆಗೆ ಮುಂದೆ ನಡೆಯಲಿರುವ ವಿಶೇಷ ನೇರ ನೇಮಕಾತಿಯಲ್ಲಿ ಕೃಪಾಂಕ ಹಾಗೂ ವಯೋಮಿತಿ ಸಡಿಲಿಕೆ ನೀಡಬೇಕು ಎಂದು ಒತ್ತಾಯಿಸಿದರು.

 ನೇಮಕಾತಿಯಲ್ಲಿ ನೇಮಕವಾಗದೆ ಉಳಿದವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಸ್ವ ಖರ್ಚಿನಲ್ಲಿ ವರ್ಗಾವಣೆಗೆ ಅನುಮತಿ ನೀಡಬೇಕೆಂದು ಗುತ್ತಿಗೆ ಶುಶ್ರೂಷಾಧಿಕಾರಿಗಳ ಪರವಾಗಿ ಚಳಿಗಾಲದ ಅಧಿವೇಶನದಲ್ಲಿ  ಮುಖ್ಯ ಮಂತ್ರಿಗಳಿಗೆ ಹಾಗೂ ಆರೋಗ್ಯ ಸಚಿವರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಬರುವ ಚಳಿಗಾಲ ಅಧಿವೇಶನದಲ್ಲಿ ಈ ಕುರಿತಂತೆ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ತಮ್ಮ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಕಳೆದ ಅನೇಕ ವರ್ಷಗಳಿಂದ ಕೇವಲ ಹತ್ತರಿಂದ ಹನ್ನೊಂದು ಸಾವಿರ ರೂಪಾಯಿ ಸಂಭಾವನೆ ಪಡೆದು ಜೀವನ ನಡೆಸುತ್ತಿದ್ದೇವೆ. ಕಡಿಮೆ ಸಂಬಳದಲ್ಲಿ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಸರ್ಕಾರ ನಮಗೆ ಸೂಕ್ತ ಭದ್ರತೆ ಒದಗಿಸದಿದ್ದರೆ ಬೀದಿ ಪಾಲಾಗಲಿದ್ದೇವೆ ಎಂದು ಮಹಿಳಾ ಶುಶ್ರೂಷಾ ಸಿಬ್ಬಂದಿಗಳು ಕಣ್ಣೀರು ಹಾಕಿದ ಘಟನೆ ನಡೆಯಿತು.

Join Whatsapp
Exit mobile version