Home ಟಾಪ್ ಸುದ್ದಿಗಳು NEET ಪರೀಕ್ಷೆ ಗೆದ್ದು ಸಾಧಿಸಿದ ಸಮೋಸಾ ಮಾರಾಟಗಾರ..!

NEET ಪರೀಕ್ಷೆ ಗೆದ್ದು ಸಾಧಿಸಿದ ಸಮೋಸಾ ಮಾರಾಟಗಾರ..!

ನವದೆಹಲಿ: ಹೊಟ್ಟೆಪಾಡಿಗಾಗಿ ಹಗಲು ಸಮೋಸಾ ಮಾರಾಟ ಮಾಡುವ ಸನ್ನಿ ಕುಮಾರ್ ನೀಟ್ ಯುಜಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.


ನಿರಂತರ ತರಬೇತಿಯ ಬಳಿಕವೂ ಇದು ಅಸಾಧ್ಯ ಎನ್ನುವ ವ್ಯಕ್ತಿಗಳಿಗೆ ಅಚ್ಚರಿಯಾಗುವಂತೆ 720 ಒಟ್ಟು ಅಂಕಗಳಿಗೆ 664 ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ.


ಬೆಳಿಗ್ಗೆ ತರಗತಿಗೆ ತೆರಳುತ್ತಿದ್ದ ಸನ್ನಿ ಕುಮಾರ್, ಮಧ್ಯಾಹ್ನ 2 ಗಂಟೆಯ ಬಳಿಕ ಸಮೋಸಾ ಮಾರುವ ಕಾಯಕಕ್ಕೆ ಮುಂದಾಗುತ್ತಿದ್ದ. ಒಂದು ಗಂಟೆ ಅವಧಿಯಲ್ಲಿ ನೋಯ್ಡಾ ಸೆಕ್ಟರ್ 12ರಲ್ಲಿ ರಸ್ತೆಬದಿಯ ಸಮೋಸಾ ಅಂಗಡಿ ಸಜ್ಜುಪಡಿಸಿಕೊಂಡು ನಿರಂತರವಾಗಿ ಐದು ಗಂಟೆ ವ್ಯಾಪಾರದಲ್ಲಿ ನಿರತನಾಗುತ್ತಿದ್ದ. ಇಡೀ ದಿನದ ಕಠಿಣ ಪರಿಶ್ರಮದ ಬಳಿಕ ಮನೆಗೆ ಬಂದು, ತಡರಾತ್ರಿವರೆಗೂ ಓದುತ್ತಿದ್ದ. ನಿರಂತರ ಪರಿಶ್ರಮದಿಂದ ಸನ್ನಿ ಈ ಅದ್ಭುತ ಸಾಧನೆ ಮಾಡುವುದು ಸಾಧ್ಯವಾಗಿದೆ.


ಸಮೋಸಾ ಅಂಗಡಿ ನಡೆಸಿ ಜೀವನ ಮಾಡುವ ನೋಯ್ಡಾದ ಸನ್ನಿ ಕುಮಾರ್ ನಿತ್ಯ ಸಂಜೆ 4ರಿಂದ 5 ಗಂಟೆ ಅಂಗಡಿಯಲ್ಲೇ ಕಳೆಯುತ್ತಾರೆ. ಇಂತಹ ಕಷ್ಟದ ನಡುವೆ ವೈದ್ಯನಾಗುವ ಆಸಕ್ತಿ ಹೇಗೆ ಬಂತು ಎಂದರೆ ಸನ್ನಿ ಹೇಳುವ ಉತ್ತರ ಕುತೂಹಲ. ಔಷಧಗಳನ್ನು ನೋಡಿ ಕುತೂಹಲ ಹೆಚ್ಚಾಗಿತ್ತು. ಇಷ್ಟು ಚಿಕ್ಕ ಔಷಧ ಅಷ್ಟು ದೊಡ್ಡ ದೊಡ್ಡ ಕಾಯಿಲೆಗಳನ್ನು ಹೇಗೆ ಗುಣಪಡಿಸುತ್ತದೆ ಎಂದು ಕುತೂಹಲ ಮೂಡಿತು ಎನ್ನುತ್ತಾರೆ ಸನ್ನಿ.


ಅಂಗಡಿ ಸಿದ್ಧಪಡಿಸುವ ನಡುವೆ ಎನ್ ಡಿ ಟಿವಿ ಈತನನ್ನು ಸಂಪರ್ಕಿಸಿದಾಗ, “ಇದುವರೆಗೆ ಯಾವ ಕಾಲೇಜಿಗೂ ಸೇರ್ಪಡೆಯಾಗಿಲ್ಲ. ಭವಿಷ್ಯದಲ್ಲಿ ಒಳ್ಳೆಯ ಕಾಲೇಜಿಗೆ ಸೇರುವ ಬಯಕೆ ಇದೆ” ಎಂದು ಹೇಳಿದ್ದಾನೆ.

ಫಿಸಿಕ್ಸ್ ವಾಲಾ ಸಂಸ್ಥಾಪಕ ಅಲಖ್ ಪಾಂಡೆ ಈ ಪ್ರತಿಭಾವಂತ ವಿದ್ಯಾರ್ಥಿಯನ್ನು ಭೇಟಿ ಮಾಡಿ, ಈತನ ಹಲವು ವಿಡಿಯೊಗಳನ್ನು ಶೇರ್ ಮಾಡಿದ ಬಳಿಕ ಈತನ ಸಾಧನೆ ಬೆಳಕಿಗೆ ಬಂದಿದೆ.

Join Whatsapp
Exit mobile version