Home ಟಾಪ್ ಸುದ್ದಿಗಳು ಜಹಾಂಗೀರ್ ಪುರ ಹಿಂಸಾಚಾರ | ರಾಮನವಮಿ ಜಾಥಾ ತಡೆಯುವಲ್ಲಿ ಪೊಲೀಸರು ವಿಫಲ; ದೆಹಲಿ ಹೈಕೋರ್ಟ್

ಜಹಾಂಗೀರ್ ಪುರ ಹಿಂಸಾಚಾರ | ರಾಮನವಮಿ ಜಾಥಾ ತಡೆಯುವಲ್ಲಿ ಪೊಲೀಸರು ವಿಫಲ; ದೆಹಲಿ ಹೈಕೋರ್ಟ್

ನವದೆಹಲಿ: ಅನುಮತಿಯಿಲ್ಲದೆ ಸಂಘಪರಿವಾರ ಆಯೋಜಿಸಿದ್ದ ರಾಮನವಮಿ ಜಾಥಾದಿಂದಾಗಿ ಜಹಾಂಗೀರ್ ಪುರ ಹಿಂಸಾಚಾರ ಉಂಟಾಗಿದೆ. ಇದನ್ನು ತಡೆಯುವಲ್ಲಿ ಪೊಲೀಸರು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ದೆಹಲಿ ನ್ಯಾಯಾಲಯ ಹೇಳಿದೆ.

ಅಕ್ರಮವಾಗಿ ನಡೆದ ಈ ಜಾಥಾದಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿ ಜೊತೆಗಿದ್ದರೂ ಅದನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಇಂತಿಯಾಝ್, ನೂರ್ ಆಲಂ, ಶೇಖ್ ಹಮೀದ್, ಅಹ್ಮದ್ ಅಲಿ, ಶೇಖ್ ಹಮೀದ್, ಎಸ್.ಕೆ. ಸಹದಾ, ಶೇಖ್ ಝಹೀರ್ ಮತ್ತು ಅಹಿರ್ ಎಂಬವರ ಜಾಮೀನು ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ಹೆಚ್ಚುವರಿ ಸೆಷನ್ ನ್ಯಾಯಾಧೀಶ ಗಗನ್ ದೀಪ್ ಸಿಂಗ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾನೂನುಬಾಹಿರವಾಗಿ ನಡೆದ ಈ ಜಾಥಾವನ್ನು ತಡೆಯದ ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿದ ನ್ಯಾಯಾಲಯ, ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಮತ್ತು ತಪ್ಪಿತಸ್ಥ ಅಧಿಕಾರಿಗಳನ್ನು ಹೊಣೆಗಾರಿಸುವಂತೆ ಪೊಲೀಸ್ ಮುಖ್ಯಸ್ಥರಿಗೆ ಆದೇಶ ನೀಡಿದೆ.

ಅಮಾಯಕರಾಗಿರುವ ಇವರನ್ನು ಈ ಪ್ರಕರಣದಲ್ಲಿ ಅಕ್ರಮವಾಗಿ ಬಂಧಿಸಲಾಗಿದೆ ಎಂದು ಕುಟುಂಬದ ಸದಸ್ಯರು ಮತ್ತು ವಕೀಲರು ತಿಳಿಸಿದ್ದಾರೆ.

ಏಪ್ರಿಲ್ 16 ರಂದು ದೆಹಲಿಯ ಜಹಾಂಗೀರ್ ಪುರದಲ್ಲಿ ರಾಮನವಮಿ ಸ್ಮರಣಾರ್ಥ ಬಜರಂಗದಳ ಮೂರು ಜಾಥಾಗಳನ್ನು ಆಯೋಜಿಸಿದ್ದು, ಇದರಲ್ಲಿ ತಲವಾರು ಮತ್ತು ಮಾರಕಾಯುಧಗಳನ್ನು ಪ್ರದರ್ಶಿಸಲಾಗಿತ್ತು. ಈ ಜಾಥಾದಲ್ಲಿ ಮುಸ್ಲಿಮ್ ವಿರೋಧಿ ಪ್ರಚೋದನಾಕಾರಿ ಮತ್ತು ಜೈ ಶ್ರೀರಾಮ್ ಘೋಷಣೆ ಕೂಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸೆರೆಯಾಗಿತ್ತು.
ಸಂಘಪರಿವಾರದ ಕಾರ್ಯಕರ್ತರು ಮಸೀದಿ ಬಳಿ ಪ್ರಚೋದನಾಕಾರಿ ಘೋಷಣೆ ಕೂಗಿ ದಾಂಧಲೆ ಆರಂಭಿಸಿ ಹಿಂಸಾಚಾರ ನಡೆಸಿದ್ದರು.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮೂವರು ಬಾಲಾಪರಾಧಿಗಳು ಸೇರಿದಂತೆ ಕನಿಷ್ಠ 36 ಜನರನ್ನು ಬಂಧಿಸಲಾಗಿದ್ದು, ಆ ಪೈಕಿ ಬಹುಪಾಲು ಮುಸ್ಲಿಮರು ಎಂದು ತಿಳಿದು ಬಂದಿದೆ.

Join Whatsapp
Exit mobile version