ನವದೆಹಲಿ: ಕಳೆದ ವರ್ಷ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಮುಸ್ಲಿಮ್ ವಿರೋಧಿ ಹತ್ಯಾಕಾಂಡಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ಸರಿಯಾಗಿ ನಡೆದಿರಲಿಲ್ಲ. ಈ ಪ್ರಕರಣದಲ್ಲಿ ದೆಹಲಿ ಪೊಲೀಸರ ವೈಫಲ್ಯತೆ ಎದ್ದು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ದೆಹಲಿ ನ್ಯಾಯಾಲಯ ತೀವ್ರ ರೀತಿಯಲ್ಲಿ ತರಾಟೆಗೆ ತೆಗೆದುಕೊಂಡಿದೆ.
ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಗರ್ಗ್ ಅವರು, ಪೊಲೀಸರು ಈ ಪ್ರಕರಣದ ಕುರಿತು ಪರಿಣಾಮಕಾರಿಯಾಗಿ ನಡೆಸಿರುವುದಿಲ್ಲ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಂಬಳವನ್ನು ಕಡಿತಗೊಳಿಸುವ ಮತ್ತು ದಂಡ ವಿಧಿಸುವ ಆದೇಶವನ್ನು ನೀಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಈ ವಿಷಯವನ್ನು ವೈಯಕ್ತಿಕವಾಗಿ ಪರಿಶೀಲನೆ ನಡೆಸುವಂತೆ ನ್ಯಾಯಾಲಯ ದೆಹಲಿ ಪೊಲೀಸ್ ಆಯುಕ್ತರಿಗೆ ಸೂಚಿಸಿದೆ.
ಈಶಾನ್ಯ ದೆಹಲಿ ನಿವಾಸಿ ಸಂತ್ರಸ್ತ ರಿಝ್ವಾನ್ ಅವರು ಸಲ್ಲಿಸಿದ್ದ ಲಿಖಿತ ದೂರಿನ ಅಧಾರದ ಮೇಲೆ ಗೋಕುಲ್ಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಮನೆಯ ಬೀಗ ಮುರಿದು ಸುಮಾರು 300 ಮಂದಿಯನ್ನೊಳಗೊಂಡ ಗಲಭೆಕೋರರು ಮನೆಯನ್ನು ಧ್ವಂಸ ಮಾಡಿ, ಹಣವನ್ನು ಲೂಟಿ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಕುರಿತು ಪೊಲೀಸರು ಸರಿಯಾದ ತನಿಖೆ ನಡೆಸಿರಲಿಲ್ಲ ಎಂದು ಅವರು ದೂರಿದ್ದರು.
ಪ್ರಸಕ್ತ ಈ ವಿಚಾರಣೆಯನ್ನು ಅಕ್ಟೋಬರ್ 1ಕ್ಕೆ ಮುಂದೂಡಲಾಗಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಮಾತ್ರವಲ್ಲ ಹಿಂಸಾಚಾರಕ್ಕೆ ಸಂಬಂದಿಸಿದಂತೆ ತ್ವರಿತ ತನಿಖೆಯನ್ನು ನಡೆಸುವಂತೆ ಸೆಪ್ಟೆಂಬರ್ 6 ರಂದು ದೆಹಲಿ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿತ್ತು.
ಈಶಾನ್ಯ ದೆಹಲಿಯಲ್ಲಿ ಮುಸ್ಲಿಂ ವಿರೋಧಿ ಹತ್ಯಾಕಾಂಡಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸಿದ್ದಕ್ಕಾಗಿ ದೆಹಲಿ ಪೊಲೀಸರ ನಡೆಯನ್ನು ಹಲವಾರು ಪ್ರಗತಿಪರರು ಖಂಡಿಸಿದ್ದಾರೆ.