ನವದೆಹಲಿ: ಐಸಿಸ್ ಜೊತೆ ನಂಟು ಹೊಂದಿದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ಬಂಧನಕ್ಕೊಳಗಾದ ಕೇರಳ ಮೂಲದ ಆರೋಪಿ ಮುಹಮ್ಮದ್ ಅಮೀನ್ (27) ದೆಹಲಿಯ ಮುಂಡೋಲಿ ಜೈಲಿನಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಆತನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.
ಅಮೀನ್ ಅವರನ್ನು UAPA ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಮಾರ್ಚ್ 2021ರಂದು ಬಂಧಿಸಲಾಗಿತ್ತು. ವಿವಿಧ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಐಸಿಸ್ ಪರವಾಗಿ ಸುದ್ದಿ ಬಿತ್ತರಿಸುತ್ತಿದ್ದರು ಮತ್ತು ಐಸಿಸ್ ಸಂಘಟನೆಗೆ ಜನರನ್ನು ನೇಮಕ ಮಾಡುತ್ತಿದ್ದರು ಎಂದು ಆರೋಪಿಸಿ, ಅವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಸದ್ಯ ಅಮೀನ್ ಮೃತಪಟ್ಟಿರುವುದನ್ನು ಜೈಲು ಅಧಿಕಾರಿಗಳು ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ ಎಂದು ಮೃತನ ಮಾವ ಮೊಯಿನ್ ಕುಟ್ಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮೃತ ಅಮೀನ್ ಶುಕ್ರವಾರ ಸಂಜೆ ಘೋಷಕರೊಂದಿಗೆ ಮಾತನಾಡಿದ್ದು, ತಲೆನೋವಿನಿಂದ ಚೇತರಿಸುತ್ತಿರುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ ಶನಿವಾರ ಬೆಳಗ್ಗೆ ಅಮೀನ್ ಅವರು ರಕ್ತವನ್ನು ವಾಂತಿ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ಜೈಲಿನಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಶನಿವಾರ ರಾತ್ರಿ ಅವರು ಸಾವನ್ನಪ್ಪಿರುವ ಕುರಿತು ತಮಗೆ ಪೊಲೀಸರು ಮಾಹಿತಿ ನೀಡಿರುವುದಾಗಿ ಮೊಯಿನ್ ಕುಟ್ಟಿ ತಿಳಿಸಿದ್ದಾರೆ.
ಕೇರಳದ ಮಲಪ್ಪುರಂ ಜಿಲ್ಲೆಯ ಮಂಕಡ ನಿವಾಸಿಯಾದ ಮುಹಮ್ಮದ್ ಅಮೀನ್ ಅವರು ಇಸ್ಲಾಮಿಕ್ ಕೋರ್ಸ್’ಗೆ ಸೇರಲು ಬೆಂಗಳೂರಿಗೆ ಹೋಗಿದ್ದು, ಆ ಬಳಿಕ ಎನ್.ಐ.ಎ ಅಧಿಕಾರಿಗಳು ಅವರನ್ನು ಬಂಧಿಸಿದ್ದರು.
ಪ್ರಕರಣದ ವಿಚಾರಣೆಯು ಈ ತಿಂಗಳು ಪ್ರಾರಂಭವಾಗಬೇಕಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಈ ವರ್ಷದ ಫೆಬ್ರವರಿಯಲ್ಲಿ ಅಮೀನ್ ಅಲಿಯಾಸ್ ಅಬು ಯಾಹ್ಯಾ ವಿರುದ್ಧ NIA ಬೆಂಗಳೂರಿನ NIA ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿತ್ತು. ಮುಹಮ್ಮದ್ ವಕಾರ್ ಲೋನ್ ಅಲಿಯಾಸ್ ವಿಲ್ಸನ್ ಕಾಶ್ಮೀರಿ, ಮಿಝಾ ಸಿದ್ದೀಕ್, ಶಿಫಾ ಹಾರಿಸ್ ಅಲಿಯಾಸ್ ಆಯೀಶಾ, ಉಬೈದ್ ಹಮೀದ್ ಮಟ್ಟಾ, ಮಾದೇಶ್ ಶಂಕರ್ ಅಲಿಯಾಸ್ ಅಬ್ದುಲ್ಲಾ, ಅಮ್ಮಾರ್ ಅಬ್ದುಲ್ ರಹಿಮಾನ್ ಮತ್ತು ಮುಝಮಿಲ್ ಹಸನ್ ಭಟ್ ಅವರನ್ನು ಆರೋಪಪಟ್ಟಿಯಲ್ಲಿ ಈ ಪ್ರಕರಣದ ಇತರ ಆರೋಪಿಗಳೆಂದು ಹೆಸರಿಸಲಾಗಿದೆ.