ದೆಹಲಿ| ಮದ್ಯ ಹಗರಣ ಪ್ರಕರಣ; ಮನೀಶ್ ಸಿಸೋಡಿಯಾ ನ್ಯಾಯಾಂಗ ಬಂಧನ ವಿಸ್ತರಣೆ

Prasthutha|

ನವದೆಹಲಿ: ದೆಹಲಿ ಮದ್ಯ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ನಾಯಕ ಮತ್ತು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ಮೇ 12 ರವರೆಗೆ ವಿಸ್ತರಿಸಲಾಗಿದೆ. ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಈ ಕ್ರಮ ಕೈಗೊಂಡಿದೆ.

- Advertisement -


ಮದ್ಯ ಹಗರಣ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ಆರೋಪಿಯನ್ನಾಗಿಸಿ ಸಿಬಿಐ ನಿನ್ನೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಭಾರತ್ ರಾಷ್ಟ್ರ ಸಮಿತಿ ನಾಯಕ ಕೆ. ಕವಿತಾ ಅವರ ಲೆಕ್ಕಪರಿಶೋಧಕ ಬುಚಿ ಬಾಬು, ಅರ್ಜುನ್ ಪಾಂಡಾ ಮತ್ತು ಅಮನ್ ದೀಪ್ ಧಲ್ ಅವರನ್ನೂ ದೋಷಾರೋಪ ಪಟ್ಟಿಯಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, ಇದು ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ಎರಡನೇ ಆರೋಪಪಟ್ಟಿಯಾಗಿದೆ.


ಮದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ದಿನಗಳ ವಿಚಾರಣೆಯ ನಂತರ ಫೆಬ್ರವರಿ 26 ರಂದು ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು. ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು, ಹಣಕಾಸು ಅವ್ಯವಹಾರಗಳ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ.

- Advertisement -


ಈ ಪ್ರಕರಣವು ಕೆಲವು ಮದ್ಯ ವ್ಯಾಪಾರಿಗಳ ಪರವಾಗಿ ದೆಹಲಿಯ ಹೊಸ ಮದ್ಯ ನೀತಿಯನ್ನು ರೂಪಿಸಿ ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದ್ದಾಗಿದೆ. ಸಿಸೋಡಿಯಾ ಅಬಕಾರಿ ಇಲಾಖೆಯ ಉಸ್ತುವಾರಿ ವಹಿಸಿದ್ದು, ಇದಕ್ಕಾಗಿ ವ್ಯಾಪಾರಿಗಳು ಲಂಚ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ವಿವಾದದ ನಂತರ ಹೊಸ ನೀತಿಯನ್ನು ಹಿಂತೆಗೆದುಕೊಳ್ಳಲಾಗಿದೆ.

Join Whatsapp
Exit mobile version