Home ಟಾಪ್ ಸುದ್ದಿಗಳು ದೇಶದ್ರೋಹ ಪ್ರಕರಣ: ಜಾಮೀನಿಗಾಗಿ ಕೆಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಶಾರ್ಜಿಲ್ ಇಮಾಮ್ ಗೆ ದೆಹಲಿ ಹೈಕೋರ್ಟ್...

ದೇಶದ್ರೋಹ ಪ್ರಕರಣ: ಜಾಮೀನಿಗಾಗಿ ಕೆಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಶಾರ್ಜಿಲ್ ಇಮಾಮ್ ಗೆ ದೆಹಲಿ ಹೈಕೋರ್ಟ್ ಸೂಚನೆ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ತಮ್ಮ ವಿರುದ್ಧ ದಾಖಲಾಗಿರುವ ದೇಶದ್ರೋಹ ಪ್ರಕರಣದಲ್ಲಿ ಜಾಮೀನು ಪಡೆಯಲು ಕೆಳ ನ್ಯಾಯಾಲಯವನ್ನು ಸಂಪರ್ಕಿಸುವಂತೆ ದೆಹಲಿ ಹೈಕೋರ್ಟ್ ಗುರುವಾರ ವಿದ್ಯಾರ್ಥಿ ನಾಯಕ ಶಾರ್ಜೀಲ್ ಇಮಾಮ್ ಗೆ ಸೂಚಿಸಿದೆ.
ಐಪಿಸಿ ಸೆಕ್ಷನ್ 124 ಎ ಅಡಿಯಲ್ಲಿ ದೇಶದ್ರೋಹ ಆರೋಪಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಮೇಲ್ಮನವಿಗಳು ಹಾಗೂ ವಿಚಾರಣೆಯನ್ನು ತಡೆಹಿಡಿಯಬೇಕು ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಮುಕ್ತಾ ಗುಪ್ತಾ ಮತ್ತು ಮಿನಿ ಪುಷ್ಕರ್ಣ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಪ್ರಕಟಿಸಿತು.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹೈಕೋರ್ಟ್ನಲ್ಲಿ ಈಗಾಗಲೇ ಬಾಕಿ ಉಳಿದಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಇಮಾಮ್ ಅರ್ಜಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ 2014ರ ಪ್ರಕರಣವೊಂದರಲ್ಲಿ ನೀಡಿದ್ದ ಆದೇಶದ ಪ್ರಕಾರ ಯಾವುದೇ ಜಾಮೀನು ಅರ್ಜಿ ಮೊದಲು ವಿಚಾರಣಾ ನ್ಯಾಯಾಲಯಕ್ಕೆ ಹೋಗಬೇಕು. ಅಲ್ಲಿ ಪರಿಹಾರ ದೊರೆಯದಿದ್ದಾಗ ಮಾತ್ರ ಹೈಕೋರ್ಟ್ಗೆ ಮನವಿ ಸಲ್ಲಿಸಬಹುದು ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್ ವಿಚಾರಣೆ ವೇಳೆ ಆಕ್ಷೇಪ ವ್ಯಕ್ತಪಡಿಸಿದರು.
ಎಸ್ ಪಿಪಿ ವಾದವನ್ನು ದಾಖಲಿಸಿಕೊಂಡ ಹೈಕೋರ್ಟ್, ಕೆಳ ನ್ಯಾಯಾಲಯವನ್ನು ಸಂಪರ್ಕಿಸಲು ಇಮಾಮ್ ಪರ ಹಾಜರಾದ ವಕೀಲ ತನ್ವೀರ್ ಅಹ್ಮದ್ ಮಿರ್ ಅವರಿಗೆ ಅನುಮತಿ ನೀಡಿತು.
ದೇಶದ್ರೋಹದ ಸೆಕ್ಷನ್ 124ಎ ಯನ್ನು ಸುಪ್ರೀಂಕೋರ್ಟ್ ಅಮಾನತಿನಲ್ಲಿಟ್ಟ ಬಳಿಕ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.

Join Whatsapp
Exit mobile version