Home ಟಾಪ್ ಸುದ್ದಿಗಳು ಎಎಪಿ ನಾಯಕ ಸತ್ಯೇಂದರ್ ಜೈನ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ತಡೆ ನೀಡಿದ ದೆಹಲಿ ನ್ಯಾಯಾಲಯ

ಎಎಪಿ ನಾಯಕ ಸತ್ಯೇಂದರ್ ಜೈನ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ತಡೆ ನೀಡಿದ ದೆಹಲಿ ನ್ಯಾಯಾಲಯ

ನವದೆಹಲಿ: ಎಎಪಿ ನಾಯಕ ಹಾಗೂ ಮಾಜಿ ಸಚಿವ ಸತ್ಯೇಂದ್ರ ಜೈನ್ ಮೇಲೆ ಇಡಿ- ಜಾರಿ ನಿರ್ದೇಶನಾಲಯ ಹಾಕಿದ್ದ ಅಕ್ರಮ ಹಣ ವರ್ಗಾವಣೆ ಮೊಕದ್ದಮೆಯ ಪ್ರಕ್ರಿಯೆಗೆ ದಿಲ್ಲಿ ಕೋರ್ಟ್ ಸೋಮವಾರ ತಡೆ ನೀಡಿದೆ. ಜಾರಿ ನಿರ್ದೇಶನಾಲಯವು ಇಡೀ ಪ್ರಕರಣವನ್ನು ವಿಶೇಷ ಕೋರ್ಟಿಗೆ ವರ್ಗಾಯಿಸಲು ಕೇಳಿಕೊಂಡಿತ್ತು.

ಸೆಪ್ಟೆಂಬರ್ 15ರಂದು ಜಾರಿ ನಿರ್ದೇಶನಾಲಯದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್. ವಿ. ರಾಜು ಅವರು ಈ ಪೂರ್ಣ ಪ್ರಕರಣವನ್ನು ಸ್ಪೆಷಲ್ ಜಡ್ಜ್ ಗೀತಾಂಜಲಿ ಗೋಯೆಲ್ ರಿಂದ ವಿಶೇಷ ಕೋರ್ಟಿಗೆ ವರ್ಗಾಯಿಸುವಂತೆ ಅರ್ಜಿ ಸಲ್ಲಿಸಿದ್ದರು. ಜೈನ್ ಅವರ ಜಾಮೀನು ಅರ್ಜಿ ವಿಚಾರಣೆಯು ನಡೆಯುತ್ತಿರುವುದರ ನಡುವೆಯೇ ಜಾರಿ ನಿರ್ದೇಶನಾಲಯ, ಮೊಕದ್ದಮೆಯನ್ನು ಬೇರೆಡೆಗೆ ವರ್ಗಾಯಿಸುವ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಜೈನ್ ಅವರ ವಕೀಲರು ವಾದಿಸಿದರು.

ನಾವು ಸಲ್ಲಿಸಿದ ಅರ್ಜಿಯ ಬಗ್ಗೆ ಬೇಗ ನಿರ್ಣಯ ಕೋರಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಜು ಅವರು ಜಿಲ್ಲಾ ಸೆಷನ್ಸ್ ಜಡ್ಜ್ ವಿನಯ್ ಕುಮಾರ್ ಗುಪ್ತ ಅವರಿಗೆ ಸೋಮವಾರ ಮನವಿ ಮಾಡುತ್ತ ಪ್ರತಿವಾದಿಗೆ ಅರ್ಜಿಯ ಪ್ರತಿ ತಲುಪಿಸಿರುವುದಾಗಿಯೂ ತಿಳಿಸಿದರು. ಈ ವಿಷಯದ ವಿಚಾರಣೆ ಸೆಪ್ಟೆಂಬರ್ 30ಕ್ಕೆ ನಡೆಯಲಿದೆ.

ವೈಭವ್ ಜೈನ್ ಮತ್ತು ಅಂಕುಶ್ ಜೈನ್ ಪರ ಹಾಜರಾದ ವಕೀಲ ಸುಶೀಲ್ ಕುಮಾರ್ ಅವರು ಅರ್ಜಿಯ ಪ್ರತಿಯನ್ನು ಸ್ವೀಕರಿಸಿದರಾದರೂ, ಈ ಸಂದರ್ಭದಲ್ಲಿ ಇಡಿ ಏಕೆ ಇಡೀ ಪ್ರಕರಣವನ್ನು ವರ್ಗಾಯಿಸುವಂತೆ ಕೇಳುತ್ತಿದೆ ಎಂದು ಆಶ್ಚರ್ಯ ಪ್ರಕಟಿಸಿದರು. ಇದು ಜಾಮೀನು ಅರ್ಜಿಯ ವಿಚಾರವೇ, ಪ್ರಕರಣ ವರ್ಗಾವಣೆಯ ವಿಚಾರವೇ ಎಂದು ಕೇಳಿದ ಸುಶೀಲ್ ಕುಮಾರ್ ಅವರು, ಜಾಮೀನು ಅರ್ಜಿ ವಿಚಾರಣೆಯು 40 ದಿನಗಳಿಂದ ನಡೆಯುತ್ತಿದೆ; ತುರ್ತು ದಿನಾಂಕ ನೀಡಬೇಕು ಎಂದು ಕೇಳಿದರು.

ಭ್ರಷ್ಟಾಚಾರ ತಡೆ ಕಾಯ್ದೆಯಡಿ 2017ರಲ್ಲಿ ಸಿಬಿಐ ಹಾಕಿದ ಎಫ್ ಐಆರ್ ಮೇಲೆ ಜಾರಿ ನಿರ್ದೇಶನಾಲಯದವರು ಸತ್ಯೇಂದರ್ ಜೈನ್ ರವರನ್ನು ಇತ್ತೀಚೆಗೆ ಬಂಧಿಸಿದ್ದರು. ನಾಲ್ಕು ಕಂಪೆನಿಗಳ ಜೊತೆಗೆ ಸಂಬಂಧವಿರಿಸಿಕೊಂಡಿರುವ ಜೈನ್ ಅವರು ಆ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎನ್ನುವುದು ಅವರ ಮೇಲಿರುವ ಆಪಾದನೆ.

Join Whatsapp
Exit mobile version