Home ಟಾಪ್ ಸುದ್ದಿಗಳು ಕೆಂಪೇಗೌಡ ಬಡಾವಣೆ ಕಾಮಗಾರಿ ವಿಳಂಬ: ಗುತ್ತಿಗೆದಾರರು, ಅಧಿಕಾರಿಗಳಿಗೆ ತರಾಟೆ

ಕೆಂಪೇಗೌಡ ಬಡಾವಣೆ ಕಾಮಗಾರಿ ವಿಳಂಬ: ಗುತ್ತಿಗೆದಾರರು, ಅಧಿಕಾರಿಗಳಿಗೆ ತರಾಟೆ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ ಕಾಮಗಾರಿಯನ್ನು ವಿಳಂಬ ಮಾಡುತ್ತಿರುವ ಗುತ್ತಿಗೆದಾರರು ಮತ್ತು ಎಂಜಿನಿಯರ್ ಗಳನ್ನು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಶುಕ್ರವಾರ ಅವರು ಬಿಡಿಎ ಉನ್ನತಾಧಿಕಾರಿಗಳೊಂದಿಗೆ ಬಡಾವಣೆಯ ಕಾಮಗಾರಿ ಪರಿಶೀಲನೆ ನಡೆಸಿ ಯಾವುದೇ ಕಾರಣಕ್ಕೂ ಬಡಾವಣೆ ಕಾಮಗಾರಿ ವಿಳಂಬವಾಗಬಾರದು ಎಂದು ಎಚ್ಚರಿಸಿದರು.

ಬಡಾವಣೆಯ ವಿವಿಧೆಡೆಯಲ್ಲಿ ನಿವೇಶನ ಅಭಿವೃದ್ಧಿ, ರಸ್ತೆ ನಿರ್ಮಾಣ ಸೇರಿದಂತೆ ಅಗತ್ಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.

15 ದಿನದಲ್ಲಿ ಕಾಮಗಾರಿ ಆರಂಭಿಸಲು ಸೂಚನೆ

ಬಿಡಿಎ ಭೂಮಿಯನ್ನು ನೀಡಿದ್ದರೂ ಕಾಮಗಾರಿಯನ್ನು ಕೈಗೊಳ್ಳುವಲ್ಲಿ ಗುತ್ತಿಗೆದಾರರು ವಿಫಲರಾಗಿದ್ದಾರೆ. ಯಂತ್ರೋಪಕರಣಗಳನ್ನು ಬಳಸಿ ಕೂಡಲೇ ಕಾಮಗಾರಿಗಳನ್ನು ಕೈಗೊಳ್ಳಬೇಕು. ಇದರ ಜವಾಬ್ದಾರಿಯನ್ನು ಸಂಬಂಧಿಸಿದ ಎಂಜಿನಿಯರ್ ಗಳು ವಹಿಸಿಕೊಳ್ಳಬೇಕು. ಇದಕ್ಕೆ ವಿಫಲರಾದರೆ ಗುತ್ತಿಗೆದಾರರು ಮತ್ತು ಎಂಜಿನಿಯರ್ ಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಯಾವುದೇ ಕಾರಣಕ್ಕೂ ಮುಖ್ಯ ಗುತ್ತಿಗೆದಾರರು ತಮಗೆ ವಹಿಸಿರುವ ಕಾಮಗಾರಿಯನ್ನು ಉಪಗುತ್ತಿಗೆ ನೀಡುವುದು ಕಂಡು ಬಂದರೆ ಇಡೀ ಗುತ್ತಿಗೆಯನ್ನೇ ರದ್ದು ಮಾಡಲಾಗುತ್ತದೆ ಎಂದೂ ಎಚ್ಚರಿಸಿದರು.

15 ದಿನದಲ್ಲಿ ಮತ್ತೆ ಭೇಟಿ

ಸ್ಥಗಿತಗೊಂಡಿರುವ ಕಾಮಗಾರಿಗಳನ್ನು 15 ದಿನಗಳೊಳಗೆ ಆರಂಭಿಸಬೇಕು ಎಂದು ಗಡುವು ವಿಧಿಸಿದ ಬಿಡಿಎ ಅಧ್ಯಕ್ಷರು, ಎರಡು ವಾರಗಳ ನಂತರ ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಲಾಗುವುದು. ಆಗಲೂ ಲೋಪಗಳು ಕಂಡು ಬಂದರೆ ಸ್ಥಳದಲ್ಲಿಯೇ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದರು.

Join Whatsapp
Exit mobile version