ಬಾಬಾಬುಡನ್ ದರ್ಗಾದ ಬಗ್ಗೆ ಹೈಕೋರ್ಟ್ ನೀಡಿರುವ ಆದೇಶ ಸ್ವೀಕಾರ್ಹವಲ್ಲ: ಪಾಪ್ಯುಲರ್ ಫ್ರಂಟ್

Prasthutha|

ಬೆಂಗಳೂರು: ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ ದರ್ಗಾದಲ್ಲಿ ಪೂಜಾ ವಿಧಿ-ವಿಧಾನಗಳನ್ನು ನಡೆಸಲು ಮುಜಾವರ್ ನೇಮಕ ಮಾಡಿ ಹಿಂದಿನ ಸರಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್ ಆದೇಶವು ಸ್ವೀಕಾರ್ಹವಲ್ಲ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ಹೇಳಿದ್ದಾರೆ.

- Advertisement -

ನಾಗಮೋಹನ್ ದಾಸ್ ಸಮಿತಿ ನೇತೃತ್ವದ ಉನ್ನತ ಮಟ್ಟದ ಸಮಿತಿಯ ವರದಿಯನ್ನಾಧರಿಸಿ ಈ ಹಿಂದಿನ ಸರಕಾರವು 2019ರ ಮಾರ್ಚ್ ನಲ್ಲಿ ನೀಡಿದ ಆದೇಶದ ಪ್ರಕಾರ, ಬಾಬಾಬುಡನ್ ದರ್ಗಾದಲ್ಲಿ 1989ರಲ್ಲಿ ಮುಜರಾಯಿ ಆಯುಕ್ತರು ನೀಡಿದ ಆದೇಶದಂತೆ ದರ್ಗಾ ಸ್ವರೂಪವನ್ನೂ, ಮುಜಾವರ್ ಹಾಗೂ ಶಾಕಾದ್ರಿಗಳ ಆಡಳಿತಾತ್ಮಕ ಮತ್ತು ಧಾರ್ಮಿಕ ಅಧಿಕಾರವನ್ನು ಎತ್ತಿಹಿಡಿದಿತ್ತು. ಆದರೆ ಇದರ ವಿರುದ್ಧ ದತ್ತಾತ್ರೇಯ ದೇವಸ್ಥಾನ ಸಂವರ್ಧನಾ ಸಮಿತಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು. ಆ ನಂತರ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಸರ್ಕಾರಿ ವಕೀಲರು ಹಿಂದಿನ ಸರ್ಕಾರದ ವಾದವನ್ನು ಸಮರ್ಥಿಸದೇ ದತ್ತಾತ್ರೇಯ ಸಂವರ್ಧನಾ ಸಮಿತಿಯ ವಾದಕ್ಕೆ ಹೆಚ್ಚು ಮಹತ್ವ ನೀಡುತ್ತಾ ಹೋದರು. ಪ್ರಮುಖವಾಗಿ ಈ ಪ್ರದೇಶದಲ್ಲಿ ಪ್ರತ್ಯೇಕ ಅರ್ಚಕರನ್ನು ನೇಮಿಸುವ ಬೇಡಿಕೆಯು ಸೂಫಿ ಪರಂಪರೆಗೆ ವಿರುದ್ಧವಾಗಿದೆ. ಎರಡನೇಯದಾಗಿ, ಸುಪ್ರೀಂ ಕೋರ್ಟ್ ಒಪ್ಪಿರುವ ನಾಗಮೋಹನ್ ದಾಸ್ ಸಮಿತಿಯ ವರದಿಯನ್ನು ಪರಿಗಣಿಸದೇ ಹೈಕೋರ್ಟ್ ನೀಡಿರುವ ಆದೇಶ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಪಾಶಾ ಹೇಳಿದ್ದಾರೆ.

ಬಾಬಾಬುಡನ್ ಗಿರಿ ಕ್ಷೇತ್ರವು ಕೋಮು ಸೌಹಾರ್ದ, ಸಾಮರಸ್ಯದ ಪ್ರತೀಕ. ಇದನ್ನು ಕೋಮುವಾದೀಕರಣಗೊಳಿಸಿ ರಾಜಕೀಯ ಲಾಭ ಪಡೆಯಲು ಬಿಜೆಪಿ-ಸಂಘಪರಿವಾರವು ದಶಕಗಳಿಂದಲೂ ಪ್ರಯತ್ನಿಸುತ್ತಾ ಬಂದಿದೆ. ರಾಜ್ಯದ ಜಾತ್ಯತೀತ ಪ್ರೇಮಿಗಳು ನಿರಂತರವಾಗಿ ಹಮ್ಮಿಕೊಂಡು ಬಂದ ಹೋರಾಟಗಳು ಬಾಬಾ ಬುಡನ್ ಗಿರಿ ಕ್ಷೇತ್ರವನ್ನು ತನ್ನ ಸುಪರ್ದಿಗೆ ಪಡೆಯುವಲ್ಲಿ ಸಂಘಪರಿವಾರಕ್ಕೆ ತೀವ್ರ ಹಿನ್ನಡೆ ಉಂಟು ಮಾಡಿತ್ತು. ಈ ಬೆಳವಣಿಗೆಗಳ ಮಧ್ಯೆ ಹಿಂದು-ಮುಸ್ಲಿಮರ ಸೌಹಾರ್ದತೆಯನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ತೀರ್ಪು ಕೂಡ ಹೊರ ಬಂದಿತ್ತು. ಇದೀಗ ಹೈಕೋರ್ಟ್ ನೀಡಿರುವ ವ್ಯತಿರಿಕ್ತ ಆದೇಶವು ಬಿಜೆಪಿ ಸರ್ಕಾರದ ಕೋಮುವಾದಿ, ಫ್ಯಾಶಿಸ್ಟ್ ಅಜೆಂಡಾವನ್ನು ಜಾರಿ ತರಲು ನೆರವು ನೀಡಲಿದೆ ಮತ್ತು ಸಮಾಜದಲ್ಲಿ ಅಶಾಂತಿಗೆ ಕಾರಣವಾಗಲಿದೆ. ಈ ತೀರ್ಪು ಎಲ್ಲಾ ರೀತಿಯಿಂದಲೂ ಅನ್ಯಾಯಯುತವಾದುದು. ಈ ಆದೇಶದ ವಿರುದ್ಧ ನ್ಯಾಯಿಕ ಮತ್ತು ಮತ್ತೊಂದು ಸುತ್ತಿನ ಪ್ರಜಾಸತ್ತಾತ್ಮಕ ಹೋರಾಟಗಳು ರೂಪುಗೊಳ್ಳಬೇಕಾಗಿದೆ ಎಂದು ನಾಸಿರ್ ಪಾಶ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp