ನವದೆಹಲಿ: ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ವಿರುದ್ಧದ ಆರೋಪಗಳನ್ನು ದೆಹಲಿ ವಿಶೇಷ ನ್ಯಾಯಾಲಯ ಕೈಬಿಟ್ಟಿದ್ದು, ತರೂರ್ ನಿರಾಳರಾಗಿದ್ದಾರೆ.
ಸೆಕ್ಷನ್ 498ಎ ಅಡಿ ದೂರು ದಾಖಲಿಸಿರುವುದರಿಂದ ಆದೇಶವನ್ನು ಅಪ್ಲೋಡ್ ಮಾಡಲಾಗದು ಎಂದೂ ನ್ಯಾಯಾಲಯ ಹೇಳಿದೆ.
ಏಳೂವರೆ ವರ್ಷಗಳಿಂದ ಚಿತ್ರಹಿಂಸೆ ಅನುಭವಿಸಿದ್ದೇನೆ ಎಂದು ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ.
2014ರ ಜನವರಿಯಲ್ಲಿ ನವದೆಹಲಿಯ ಪಂಚತಾರಾ ಹೋಟೆಲ್ ನ ಕೊಠಡಿಯೊಂದರಲ್ಲಿ ಸುನಂದಾ ಶವವಾಗಿ ಪತ್ತೆಯಾಗಿದ್ದರು. ಈ ಬಗ್ಗೆ ದೆಹಲಿ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡಿದ್ದರು. ದೆಹಲಿ ಪೊಲೀಸರು ಸೆಕ್ಷನ್ 498 ಎ (ಕ್ರೌರ್ಯ) ಮತ್ತು 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಅಥವಾ ಪರ್ಯಾಯವಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಆರೋಪಗಳನ್ನು ನಿಗದಿಪಡಿಸುವಂತೆ ನ್ಯಾಯಾಲಯವನ್ನು ಕೋರಿದ್ದರು. ವಿಷದಿಂದ ಹಾಗೂ ಅಲ್ ಪ್ರಾಕ್ಸ್ ಸೇವನೆಯಿಂದಾಗಿ ಆಕೆ ಸಾವನ್ನಪ್ಪಿದ್ದಾರೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ವಾದಿಸಿದ್ದರು. ಆದರೆ ಆಕ್ಷೇಪಿಸಲಾದ ಔಷಧ ಸುನಂದಾ ದೇಹದಲ್ಲಿ ಪತ್ತೆಯಾಗಿಲ್ಲ ಎಂದು ವಿಧಿ ವಿಜ್ಞಾನ ವರದಿಗಳು ಹೇಳುತ್ತಿರುವುದಾಗಿ ಹಿರಿಯ ವಕೀಲ ವಿಕಾಸ್ ಪಹ್ವಾ ತಿಳಿಸಿದ್ದರು.
ಸುನಂದಾ ಪುಷ್ಕರ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರಿಗೆ 2018ರ ಜುಲೈ 5 ರಂದು ಜಾಮೀನು ಮಂಜೂರಾಗಿದೆ. ತಮ್ಮ ವಿರುದ್ಧವಿರುವ ಆರೋಪ ಕೈಬಿಡುವಂತೆ ಮನವಿ ಮಾಡಿದ್ದಾರೆ. ಅದರಂತೆ ಬುಧವಾರ ದೆಹಲಿ ವಿಶೇಷ ನ್ಯಾಯಾಲಯ ಶಶಿ ತರೂರ್ ವಿರುದ್ಧದ ಆರೋಪಗಳನ್ನು ಕೈಬಿಟ್ಟಿದೆ.