ಬೆಂಗಳೂರು: ಮೂರು ತಿಂಗಳ ಹಿಂದೆ ಮೃತಪಟ್ಟ ಸಿ ನಾಗರಾಜಪ್ಪ ಎಂಬಾತ ದಿಢೀರ್ ಪ್ರತ್ಯಕ್ಷವಾಗಿ ಕುಟುಂಬಕ್ಕೆ ದೊಡ್ಡ ಶಾಕ್ ನೀಡಿದ್ದ ಘಟನೆ ತುಮಕೂರಿನಿಂದ ವರದಿಯಾಗಿದೆ.
ಈ ಹಿಂದೆ ನಾಗರಾಜಪ್ಪ ಮೃತಪಟ್ಟಿದ್ದಾನೆ ಎಂದು ಘೋಷಿಸಿದ ವೈದ್ಯರು, ಮರಣೋತ್ತರ ಪರೀಕ್ಷೆಯನ್ನು ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು. ಈ ನಿಟ್ಟಿನಲ್ಲಿ ಅವರ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಮಾತ್ರವಲ್ಲ ಅವರ ನಾಪತ್ತೆ ಪ್ರಕರಣವನ್ನು ಪೊಲೀಸರು ಮುಚ್ಚಿಹಾಕಿದ್ದರು.
ಈ ನಡುವೆ ಮೂರು ತಿಂಗಳ ಬಳಿಕ ಬಸ್ ನಿಂದ ಇಳಿದ ನಾಗರಾಜಪ್ಪ ನೇರವಾಗಿ ಮನೆಗೆ ಬಂದ ಕುಟುಂಬಕ್ಕೆ ಅಚ್ಚರಿ ಮೂಡಿಸಿದ್ದಾರೆ.
ಮದ್ಯವ್ಯಸನಿಯಾಗಿದ್ದ ನಾಗರಾಜಪ್ಪ ಎಂಬಾತನನ್ನು ವಿವಿಧ ಖಾಯಿಲೆಯ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್ ನಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಗೆ ದಾಖಲಿಸಲಾಗಿತ್ತು. ಈ ನಡುವೆ ಹೆಚ್ಚಿನ ಚಿಕಿತ್ಸೆಯ ಅಗತ್ಯದ ಹಿನ್ನೆಲೆಯಲ್ಲಿ ಅವರನ್ನು ಕೋರಮಂಗಲದ ಮತ್ತೊಂದು ಆಸ್ಪಾತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿಂದ ನಾಗರಾಜಪ್ಪ ಆಸ್ಪತ್ರೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡದೆ ತಪ್ಪಿಸಿಕೊಂಡಿದ್ದರು..
ಆಸ್ಪತ್ರೆಯಿಂದ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ ಕುಟುಂಬ ಆತಂಕದಲ್ಲಿತ್ತು. ಈ ನಡುವೆ ಸೆಪ್ಟೆಂಬರ್ 18 ರಂದು ಆಸ್ಪತ್ರೆಯ ಭದ್ರತಾ ಸಿಬ್ಬಂದಿ, ನಾಗರಾಜಪ್ಪ ಅವರ ಮಗಳನ್ನು ಸಂಪರ್ಕಿಸಿ ತಂದೆ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದರು. ಮೃತ ವ್ಯಕ್ತಿಗೂ ನಾಗರಾಜಪ್ಪ ಅವರ ದೇಹಕ್ಕೂ ಸಾಮ್ಯತೆ ಕಂಡುಬಂದ ನಿಟ್ಟಿನಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಿದ ನಂತರ ಕುಟುಂಬದ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಸಿದ್ದೆವು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸದ್ಯ ನಾಗರಾಜಪ್ಪ ಜೀವಂತವಾಗಿ ಮನೆಗೆ ಹಿಂದಿರುಗಿದ್ದು, ಆಸ್ಪತ್ರೆಯ ಚಿಕಿತ್ಸೆ ಇಷ್ಟವಿಲ್ಲದ ಕಾರಣ ಅಲ್ಲಿಂದ ತಪ್ಪಿಸಿಕೊಂಡಿದೆ ಎಂದು ನಾಗರಾಜಪ್ಪ ತಿಳಿಸಿದ್ದಾರೆ.
ಮೂರು ಮಕ್ಕಳ ತಂದೆಯಾಗಿರುವ ನಾಗರಾಜಪ್ಪ ಅವರ ಜೀವಂತ ಮರಳುವಿಕೆಯಿಂದಾಗಿ ಕುಟುಂಬದಲ್ಲಿ ಸಡಗರ ಮನೆಮಾಡಿದೆ.