Home ಕ್ರೀಡೆ ಡೇವಿಡ್‌ ಮಲಾನ್‌ ಶತಕ ವ್ಯರ್ಥ ; ಇಂಗ್ಲೆಂಡ್‌ ವಿರುದ್ಧ ಆಸ್ಟ್ರೇಲಿಯಾ ತಂಡಕ್ಕೆ 6 ವಿಕೆಟ್‌ ಜಯ

ಡೇವಿಡ್‌ ಮಲಾನ್‌ ಶತಕ ವ್ಯರ್ಥ ; ಇಂಗ್ಲೆಂಡ್‌ ವಿರುದ್ಧ ಆಸ್ಟ್ರೇಲಿಯಾ ತಂಡಕ್ಕೆ 6 ವಿಕೆಟ್‌ ಜಯ

ಅಡಿಲೇಡ್‌: ಟಿ20 ವಿಶ್ವಕಪ್‌ ಗೆದ್ದ ಹುಮ್ಮಸ್ಸಿನ ಬೆನ್ನಲ್ಲೇ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯವನ್ನಾಡಲು ಮೈದಾನಕ್ಕಿಳಿದಿದ್ದ ಇಂಗ್ಲೆಂಡ್‌ ತಂಡಕ್ಕೆ ಸೋಲಿನ ಸ್ವಾಗತ ದೊರೆತಿದೆ. ಅಡಿಲೇಡ್‌ನಲ್ಲಿ ನಡೆದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ,  ಜಾಸ್‌ ಬಟ್ಲರ್‌ ಸಾರಥ್ಯದ ಇಂಗ್ಲೆಂಡ್‌ ತಂಡವನ್ನು 6 ವಿಕೆಟ್‌ ಅಂತರದಲ್ಲಿ ಮಣಿಸಿದೆ.  

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ್ದ ಇಂಗ್ಲೆಂಡ್‌, ಡೇವಿಡ್‌ ಮಲಾನ್‌ ಗಳಿಸಿದ ಆಕರ್ಷಕ ಶತಕದ ನೆರವಿನಿಂದ 9 ವಿಕೆಟ್‌ ನಷ್ಟದಲ್ಲಿ 287 ರನ್‌ಗಳಿಸಿತ್ತು. ಆದರೆ ಡೇವಿಡ್‌ ವಾರ್ನರ್‌-ಟ್ರಾವಿಸ್‌ ಹೆಡ್‌ ಮೊದಲ ವಿಕೆಟ್‌ಗೆ 147 ರನ್‌ಗಳಿಸುವ ಮೂಲಕ ಆಸ್ಟ್ರೇಲಿಯಾ ಚೇಸಿಂಗ್‌ ಅನ್ನು ಸುಲಭಗೊಳಿಸಿದರು. 46. 5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದಲ್ಲಿ 291 ರನ್‌ಗಳಿಸಿದ ಆಸೀಸ್‌, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ವಾರ್ನರ್‌ 86, ಟ್ರಾವಿಸ್‌ ಹೆಡ್‌ 69 ಹಾಗೂ ಸ್ಟೀವನ್‌ ಸ್ಮಿತ್‌ ಅಜೇಯ 80 ರನ್‌ಗಳಿಸಿದರು. ಇಂಗ್ಲೆಂಡ್‌ ಪರ ಬೌಲಿಂಗ್‌ನಲ್ಲಿ ಡೆವಿಡ್‌ ವಿಲ್ಲಿ 2, ಕ್ರಿಸ್‌ ಜೋರ್ಡಾನ್‌ ಮತ್ತು ಲಿಯಾಮ್‌ ಡೌಸನ್‌ ತಲಾ 1 ವಿಕೆಟ್‌ ಪಡೆದರು.

ಇದಕ್ಕೂ ಮೊದಲು ಬ್ಯಾಟಿಂಗ್‌ ನಡೆಸಿದ್ದ ಇಂಗ್ಲೆಂಡ್‌ ಪರ ಡೇವಿಡ್‌ ಮಲಾನ್‌ ಹೊರತು ಪಡಿಸಿ ಉಳಿದವರೆಲ್ಲೂ ನೀರಸ ಬ್ಯಾಟಿಂಗ್‌ ಪ್ರದರ್ಶಿಸಿದರು. 128 ಎಸೆತಗಳನ್ನು ಎದುರಿಸಿದ ಮಲಾನ್‌, 4 ಸಿಕ್ಸರ್‌ ಮತ್ತು 12 ಬೌಂಡರಿಗಳ ನೆರವಿನಿಂದ 134 ರನ್‌ಗಳಿಸಿದ್ದ ವೇಳೆ ಝಂಪಾ ಬೌಲಿಂಗ್‌ನಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ನಾಯಕ ಜಾಸ್‌ ಬಟ್ಲರ್‌ 29 ರನ್‌ ಮತ್ತು ಕೊನೆಯಲ್ಲಿ ಡೇವಿಡ್‌ ವಿಲ್ಲಿ 34 ರನ್‌ಗಳಿಸಿ ಅಜೇಯರಾಗುಳಿದರು. ಆಸೀಸ್‌ ಪರ ನಾಯಕ ಕಮ್ಮಿನ್ಸ್‌ ಮತ್ತು ಆಡಮ್ ಝಂಪಾ ತಲಾ ಮೂರು ವಿಕೆಟ್‌ ಪಡೆದರು.

3 ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯ ಶನಿವಾರ ಸಿಡ್ನಿಯಲ್ಲಿ ನಡೆಯಲಿದೆ.

Join Whatsapp
Exit mobile version